ಮಡಿಕೇರಿ, ಮಾ. 30 : ದೇಶದ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಅತಂತ್ರ ಫಲಿತಾಂಶ ದೊರೆಯುತ್ತದೆ. ಇದರಿಂದ ಬಿಎಸ್ಪಿ ಪಕ್ಷದ ಮಾಯಾವತಿ ಪ್ರಧಾನಿಯಾಗುವದು ನಿಶ್ಚಿತ ಎಂದು ಕೊಳ್ಳೇಗಾಲ ಶಾಸಕ, ಮಾಜಿ ಸಚಿವ ಎನ್.ಮಹೇಶ್ ಭವಿಷ್ಯ ನುಡಿದರು.
ನಗರದ ಕೂರ್ಗ್ ಕಮ್ಯುನಿಟಿ ಹಾಲ್ನಲ್ಲಿ ನಡೆದ ಬಿಎಸ್ಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಗಂಡಾಂತರಕ್ಕೆ ಸಿಲುಕಿಕೊಂಡಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಸುಳ್ಳು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸಿ ಮತಗಳಿಸಿಕೊಂಡಿದೆ. ದೇಶದ ಬಹುಜನ ಸಮಾಜಗಳು ಮಾತ್ರ ಇನ್ನೂ ಜಾಗೃತಗೊಂಡಿಲ್ಲ. ಮತದಾನ ಮಾಡುವ ಮುನ್ನ ಒಮ್ಮೆ ಯೋಚಿಸಿ ಮತ ಚಲಾವಣೆ ಮಾಡಿ. ಮತಗಳ ಮೌಲ್ಯವನ್ನು ತಿಳಿದುಕೊಳ್ಳಿ. ಬಿಜೆಪಿ ಪಕ್ಷ ಬಹುಮತ ಪಡೆದು 5 ವರ್ಷ ಆಡಳಿತ ನಡೆಸಿದೆ. ಚುನಾವಣೆ ಪೂರ್ವ ನೀಡಿದ ಭರವಸೆಗಳು ಇನ್ನೂ ಈಡೇರಿಲ್ಲ. 5 ವರ್ಷದಲ್ಲಿ ಜನವಿರೋಧಿ ನೀತಿ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕಥೆ ಏನಾಗಿದೆ ಎಂದು ಪ್ರಶ್ನಿಸಿದರು.
2 ಕೋಟಿ ವಾರ್ಷಿಕವಾಗಿ ಉದ್ಯೋಗ ಸೃಷ್ಠಿ ಮಾಡುವ ಭರವಸೆ ನೀಡಿ 5 ವರ್ಷ ಕಳೆದಿದೆ ಆದರೆ ಈವರೆಗೆ ಕೇವಲ 27 ಲಕ್ಷ ಉದ್ಯೋಗ ಸೃಷ್ಠಿಯಾಗಿದೆ. ನೋಟ್ ಅಮಾನೀಕರಣದಿಂದ ರಾಷ್ಟ್ರದ 2 ಕೋಟಿ ಉದ್ಯೋಗಗಳು ನಾಶವಾಗಿದೆ. ಚುನಾವಣೆ ವೇಳೆಯಲ್ಲಿ ರಾಮ ಮಂದಿರ ಮಾತನಾಡುವ ಬಿಜೆಪಿ ಪಕ್ಷ ಇದುವರೆಗೂ ಯಾಕೆ ಮಂದಿರ ನಿರ್ಮಾಣ ಮಾಡಿಲ್ಲ. ಅದು ಕೇವಲ ಚುನಾವಣೆ ಗಿಮಿಕ್. ರಾಮ ಮಂದಿರ ಹೆಸರಿನಲ್ಲಿ ಮತ ಸೆಳೆಯುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷ ಕೂಡ ಜನರ ನೋವಿಗೆ ಸ್ಪಂದಿಸಿಲ್ಲ. 2ಜಿ, 3ಜಿ ಸೆಕ್ಟ್ರಮ್ ಹಗರಣದಲ್ಲಿತ್ತೇ ಹೊರತು ಅಭಿವೃದ್ದಿ ಮಾಡಿಲ್ಲ. ಮಾತಿನಲ್ಲಿ ಮಾತ್ರ ಬಡವರ ಪರ ಎಂದು ಹೇಳುವ ಕಾಂಗ್ರೆಸಿಗರು ಮತ ಪಡೆದ ನಂತರ ಮರೆತು ಬಿಡುತ್ತಾರೆ. ಇಂದಿರಾ ಗಾಂಧಿ ಕಾಲದಿಂದಲೂ ಗರಿಬಿ ಹಠವೋ, ದೇಶ್ ಬಚಾವೋ ಎಂದು ಹೇಳುತ್ತಿರುವ ಕಾಂಗ್ರೆಸ್ ಈವರೆಗೂ ಬಡತನ ನಿರ್ಮೂಲನೆ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಹೆಸರು ಹೇಳಿ ಮತ ಸೆಳೆದುಕೊಳ್ಳುತ್ತಿದ್ದಾರೆ. ಆದರೆ ಈ ಪಕ್ಷದಿಂದ ಯಾವದೇ ಲಾಭವಿಲ್ಲ. ಇವೆರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದರು.
ಕೊಡಗು, ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಚಂದ್ರೆಗೌಡ ಮಾತನಾಡಿ, ಬಿಎಸ್ಪಿ ಪಕ್ಷ ಬಡವರ ಪಕ್ಷ. ಕೊಡಗು ಜಿಲ್ಲೆಯಲ್ಲಿ ಮೊದಲ ಪ್ರಚಾರ ಪ್ರಾರಂಭಿಸಿದ್ದೇನೆ. ಉತ್ತಮ ಜನಪ್ರತಿನಿಧಿಯನ್ನು ಆಯ್ಕೆಗೊಳಿಸುವ ಶಕ್ತಿ ಮತದಾರರಿಗಿದೆ. ಎಚ್ಚೆತ್ತು ಮೌಲ್ಯ ಮತಗಳನ್ನು ಚಲಾವಣೆ ಮಾಡಿ ಎಂದರು. 30ಕ್ಕೂ ಹೆಚ್ಚು ಯುವಕರು ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ, ರಾಜ್ಯ ಪ್ರಧಾನ ಕಾರ್ಯದರ್ಶೀ ಅರಕಲವಾಡಿ ನಾಗೇಂದ್ರ, ಮಾದೇಶ್ ಉಪ್ಪಾರ್, ವಲಯ ಉಸ್ತುವಾರಿ ಕರಾಟೆ ಸಿದ್ದರಾಜು, ವಿಭಾಗೀಯ ಉಸ್ತುವಾರಿ ಅಮೃತ ಅತ್ರಾಡಿ, ರಾಹುಲ್, ಸೋಮೇಶ್, ಮಡಿಕೇರಿ ಕ್ಷೇತ್ರ ಉಸ್ತುವಾರಿ ರಫೀಕ್ ಇದ್ದರು.