ಮಡಿಕೇರಿ, ಮಾ. 30: ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ವಿವಿಧ ತಾಲೂಕು, ಹೋಬಳಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಕೊಡಗು ಜಾನಪದ ಉತ್ಸವ ಆಯೋಜಿಸಲಾಗಿದೆ.ಮಾರ್ಚ್ 31ರಂದು ನಡೆಸಲು ನಿರ್ಧರಿಸಿದ್ದ ಕೊಡಗು ಜಾನಪದ ಉತ್ಸವವನ್ನು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿರುವದರಿಂದ ಜೂನ್ 16ಕ್ಕೆ ಮಡಿಕೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.
ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಜಿಲ್ಲಾ ಜಾನಪದ ಪರಿಷತ್ ಮೂರು ತಾಲೂಕು ಘಟಕ, ಶನಿವಾರಸಂತೆ, ಸೋಮವಾರಪೇಟೆ, ಗೋಣಿಕೊಪ್ಪ, ಮೂರ್ನಾಡು ಸೇರಿದಂತೆ ಒಟ್ಟು ಏಳು ಘಟಕಗಳನ್ನು ಹೊಂದಿದ್ದು, ಜಿಲ್ಲೆಯಲ್ಲಿ ವಿವಿಧ ರೀತಿಯ ಜಾನಪದ ಕಲೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕೊಡಗು ಜಾನಪದ ಉತ್ಸವದ ಸಂಚಾಲಕÀ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ಮೂರು ವರ್ಷದ ನಂತರ ಕೊಡಗಿನಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಕ್ರಮ ಜಿಲ್ಲಾ ಮಟ್ಟದಲ್ಲಿ ಜರುಗಲಿದೆ. ಉತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗುತ್ತದೆ. ಅಂತೆಯೇ ಕೊಡಗಿನಾದ್ಯಂತಲಿನ ಜಾನಪದೀಯ ಪರಿಕರಗಳ ವಿಶೇಷ ವಸ್ತು ಪ್ರದರ್ಶನ ಕೂಡ ಜಾನಪದ ಉತ್ಸವದ ಸಂದರ್ಭ ವಿಶೇಷ ಆಕರ್ಷಣೆಯಾಗಲಿದೆ. ಹಾಗೇ, ಜಾನಪದ ಮಳಿಗೆಗಳು, ಸ್ತ್ರೀಶಕ್ತಿ ಸಂಘಟನೆಗಳು ಉತ್ಪಾದಿಸಿದ ತಿನಿಸುಗಳು, ಉತ್ಪನ್ನಗಳಿಗೂ ಉತ್ಸವದಲ್ಲಿ ಮಳಿಗೆ ವ್ಯವಸ್ಥೆಗೊಳಿಸಲಾಗುತ್ತದೆ. ಜಿಲ್ಲಾ ಮಟ್ಟದ ಈ ಉತ್ಸವದಲ್ಲಿ ಎರಡು ಗಂಟೆಗಳ ಕಾಲ ವಿನೂತನವಾದ ಜಾನಪದ ನೃತ್ಯ, ಹಾಡುಗಳು ಕೂಡ ಪ್ರೇಕ್ಷಕರ ಆಕರ್ಷಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮತ್ತು ವಿಚಾರಗೋಷ್ಠಿ ಸಮಿತಿ ಅಧ್ಯಕ್ಷ ಎಸ್.ಐ. ಮುನೀರ್ ಅಹಮ್ಮದ್ ರಾಜ್ಯಮಟ್ಟದಿಂದಲೂ ಜಾನಪದ ವಿದ್ವಾಂಸರನ್ನು ಉತ್ಸವದ ಅಂಗವಾಗಿ ವಿಚಾರಗೋಷ್ಠಿಗೆ ಆಹ್ವಾನಿಸಲಾಗುತ್ತದೆ. ಸಂಸ್ಕøತಿ, ಪ್ರಕೃತಿ, ಮಹಿಳೆ ಸೇರಿದಂತೆ ಜಾನಪದದಲ್ಲಿ ಹಾಸ್ಯ ಮೊದಲಾದ ವಿಚಾರಗಳ ವಿಚಾರಗೋಷ್ಠಿಯನ್ನೂ ಆಯೋಜಿಸಲು ಪ್ರಯತ್ನಿಸಲಾಗುತ್ತದೆ ಎಂದಿದ್ದಾರೆ.