ವೀರಾಜಪೇಟೆ, ಮಾ. 30: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ಎನ್. ಲಲಿತ ಎಂಬವರ ಕಾಫಿ ತೋಟದ ಹೊಸ ಕೆರೆಗೆ ಇಂದು ಬೆಳಗಿನ ಜಾವ ಅಂದಾಜು 8 ವರ್ಷದ ಆನೆ ಮರಿಯೊಂದು ಬಿದ್ದಿದ್ದು, ಅರಣ್ಯ ಇಲಾಖೆಯ ಪರಿಶ್ರಮದಿಂದ ಮೇಲೆ ಬಂದ ಆನೆ ಮರಿ ರೋಷದಿಂದ ಓಡಾಡಿ ನಾಲ್ಕು ವಾಹನಗಳಿಗೆ ಹಾನಿ ಮಾಡಿದ ಘಟನೆ ನಡೆಯಿತು.ಬೆಳಿಗ್ಗೆ 8.30ರ ಸಮಯದಲ್ಲಿ ಕೆರೆಗೆ ಕಾಡಾನೆ ಮರಿ ಬಿದ್ದಿರುವ ಕುರಿತು ಕಾರ್ಮಿಕರಿಗೆ ಸುಳಿವು ದೊರೆತಿದೆ. ತೋಟ ಕೆಲಸಕ್ಕೆ ಆಗಮಿಸಿದ ಕಾರ್ಮಿಕರು ಕೆರೆಯಲ್ಲಿ ಮರಿಯಾನೆ ಸಾವು ಬದುಕಿನ ಮದ್ಯೆ ಹೋರಾಡುತ್ತಿರುವದನ್ನು ಗಮನಿಸಿದರು. ತಕ್ಷಣ ಅರಣ್ಯ ಇಲಾಖೆಗೆ ದೂರು ನೀಡಲಾಯಿತು. ಆರ್ಎಫ್ಓ ಗೋಪಾಲ್ ಅವರ ತಂಡ ಹಗ್ಗದ ಮೂಲಕ ಮರಿಯಾನೆಯನ್ನು ರಕ್ಷಿಸಿದರಾದರೂ ಕೆರೆಯಿಂದ ಮೇಲೆ ಬಂದ ಆನೆಮರಿ ರೋಷಗೊಂಡು ಓಡಲಾರಂಭಿಸಿದೆ. ಈ ಸಂದರ್ಭ ಒಂದು ಬೈಕ್, ಒಂದು ಕಾರು, ಇಲಾಖೆಯ ಒಂದು ಜೀಪು ಹಾಗೂ ಗ್ರಾಮಸ್ಥರೊಬ್ಬರ ಜೀಪ್ಗೆ ಗುದ್ದಿ ಹಾನಿಮಾಡಿ ಕಾಡಿನತ್ತ ಓಡಿದೆ.
ಕೆದಮುಳ್ಳೂರು ಪಾಲಂಗಾಲ, ತೋರಾ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ರ್ಯೆತರು ಹಾಗೂ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಇಲಾಖೆಗೆ ದೂರು ನೀಡಿದರೆ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡುತ್ತಾರೆ. ಮರಳಿದ ತಕ್ಷಣ ಕಾಡಾನೆಗಳು ನಾಡಿನಲ್ಲಿ ಸಂಚರಿಸುತ್ತಿರುತ್ತವೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಇಲಾಖೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಬೇಕು ಎಂದು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ. ಪರಮೇಶ್ವರ್ ಆಗ್ರಹಿಸಿದ್ದಾರೆ.