ಮಡಿಕೇರಿ, ಮಾ. 27: ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವತಿಯಿಂದ ಸ್ಪಿಕ್ ಮೆಕೆ ಸಂಯುಕ್ತ ಆಶ್ರಯದಲ್ಲಿ ತಾ. 30 ರಿಂದ ಏಪ್ರಿಲ್ 1 ರವರೆಗೆ ಶಾಲಾ ಮೈದಾನದಲ್ಲಿ ವಿನೂತನವಾದ ಕ್ರಾಫ್ಟ್ ಮೇಳ -2019 ನ್ನು ಆಯೋಜಿಸಲಾಗಿದೆ ಎಂದು ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಪ್ರಮುಖರು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಭಾರತದ ಪಾರಂಪರಿಕ ಸಂಸ್ಕೃತಿಯನ್ನು ಬಿಂಬಿಸುವ ಭಾರತೀಯ ಕರಕುಶಲ ಕಾರ್ಯಾಗಾರ ವನ್ನು ಹಮ್ಮಿಕೊಳ್ಳ ಲಾಗಿದ್ದು, ಕೊಡಗಿನ ವಿವಿಧೆಡೆಗಳಿಂದ ಹಲವಾರು ಶಾಲೆಗಳ ಸುಮಾರು 800 ವಿದ್ಯಾರ್ಥಿಗಳು ಭಾಗವಹಿ ಸುತ್ತಿರುವ ಈ ಕಾರ್ರ್ಯಾಗಾರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಸುಪ್ತ ಕಲಾ ಪ್ರತಿಭೆಯು ಹೊರಹೊಮ್ಮಲು ನೆರವಾಗಲಿದೆ.

ದೇಶದ ಪಾರಂಪರಿಕ ಕಲೆಗಳಾದ ರಾಜಸ್ಥಾನದ ಟೈ ಅಂಡ್ ಡೈ, ದೆಹಲಿಯ ಪೇಪರ್ ಮಾಷೆ, ಆಂಧ್ರದ ಚೆರಿಯಲ್ ಮಾಸ್ಕ್ ಮೇಕಿಂಗ್ ಮತ್ತು ಕೂಚಿಪುಡಿ ಮಧ್ಯಪ್ರದೇಶದ ಗೋಂದ್, ಕರ್ನಾಟಕದ ಯಕ್ಷಗಾನ, ಚಿತ್ತಾರ, ಕಂಸಾಳೆ ಹಾಗೂ ಕಸೂತಿಗಳ ಕಾರ್ಯಾಗಾರವನ್ನು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ದಲ್ಲಿ 3 ದಿನಗಳಲ್ಲಿ ನಡೆಸಲಾಗುತ್ತಿದೆ.

ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಮಡಿಕೇರಿಯಲ್ಲಿ ನಡೆಯುವ ಕ್ಟಾಫ್ಟ್ ಮೇಳಕ್ಕೆ ಆಗಮಿಸಲಿರುವ ಹೆಸರಾಂತ ಕಲಾವಿದರು, ಚಿತ್ರಕಾರರು, ಶಿಲ್ಪಿಗಳು ವಿದ್ಯಾರ್ಥಿ, ಪೆÇೀಷಕರಿಗೆ ಕಲಾ ತರಬೇತಿ ನೀಡಲಿದ್ದಾರೆ.

ತಾ. 30 ರಿಂದ ಏಪ್ರಿಲ್ 1 ರವರೆಗೆ ಮೂರು ದಿನಗಳ ಕಾಲ ಪ್ರತಿನಿತ್ಯ ಸಂಜೆ 4 ಗಂಟೆಯಿಂದ 6.15 ಗಂಟೆಯವರೆಗೆ ಕ್ರಾಫ್ಟ್ ಮೇಳದ ವಿಶೇಷತೆಯಾಗಿ ಕಲಾಕೃತಿಗಳು, ಚಿತ್ರಕಲೆಗಳು, ಕಸೂತಿ (ಹ್ಯಾಂಡ್ ಲುಮ್) ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನೂ ಆಯೋಜಿಸಲಾಗಿದೆ.

ತಾ. 30 ರಂದು ಬೆಳಿಗ್ಗೆ 8.30 ಗಂಟೆಗೆ ಶಾಲೆಯಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ ಕ್ರಾಫ್ಟ್ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ.ಪಿ. ಉತ್ತಪ್ಪ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ, ನಿರ್ದೇಶಕ ಸಿ.ಬಿ. ದೇವಯ್ಯ, ಶೈಕ್ಷಣಿಕ ಸಮಿತಿ ಅಧ್ಯಕ್ಷೆ ಊರ್ವಶಿ ಮುದ್ದಯ್ಯ ಪಾಲ್ಗೊಳ್ಳಲಿದ್ದಾರೆ.

ಸಂಜೆ 6.30 ಗಂಟೆಯಿಂದ 8 ಗಂಟೆಯವರೆಗೆ ದೇಶದ ಹೆಸರಾಂತ ಸಮರಕಲೆ ಕೇರಳದ ಪ್ರಸಿದ್ಧ ಕಲರಿಪಯ್ಯಟ್‍ವನ್ನು ವಲ್ಲಭಟ್ಟು ಕೇಂದ್ರದಿಂದ ಪ್ರದರ್ಶನಗೊಳ್ಳಲಿದೆ.

ತಾ. 31 ರಂದು ಸಂಜೆ 6.30 ರಿಂದ 8 ಗಂಟೆಯವರೆಗೆ ಹೆಸರಾಂತ ನೃತ್ಯ ಕಲಾವಿದೆ ಬೆಂಗಳೂರಿನ ವೈಜಯಂತಿ ಕಾಶಿ ಮತ್ತು ಪ್ರತಿಕ್ಷಾ ಕಾಶಿ ತಂಡದಿಂದ ಕುಚಿಪುಡಿ ನೃತ್ಯ ಪ್ರದರ್ಶನವಿರುತ್ತದೆ.

ಏಪ್ರಿಲ್ 1 ರಂದು ಸಂಜೆ 6.30 ರಿಂದ 8 ಗಂಟೆಯವರೆಗೆ ಹೆಸರಾಂತ ವಿದ್ವಾನ್ ಮೈಸೂರು ಮಂಜುನಾಥ್ ಮತ್ತು ವಿದ್ವಾನ್ ನಾಗರಾಜ್ ಅವರಿಂದ ಕರ್ನಾಟಿಕ್ ವಯೋಲಿನ್ ಕಾರ್ಯಕ್ರಮ ಆಯೋಜಿತವಾಗಿದೆ ಎಂದು ಅವರುಗಳು ವಿವರಿಸಿದರು.

ಗೋಷ್ಠಿಯಲ್ಲಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ, ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಹರೀಶ್, ಕಾರ್ಯಕ್ರಮ ಸಂಯೋಜಕ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಗೌರವ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಶಾಲಾ ವ್ಯವಸ್ಥಾಪಕ ರವಿ ಹಾಜರಿದ್ದರು.