ಕುಶಾಲನಗರ, ಮಾ. 27: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ತೆರಳಲು ಅಧಿಕೃತ ಪಾಸ್ ಹೊಂದಿದ್ದ ವಿದ್ಯಾರ್ಥಿಗಳನ್ನು ಬಸ್‍ನಲ್ಲಿ ಪ್ರಯಾಣಿಸಲು ಅಡ್ಡಿಪಡಿಸಿದ ಘಟನೆ ಯೊಂದು ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಬುಧವಾರ ಸಂಜೆ ನಡೆದಿದೆ. ಬಸ್‍ನ ಚಾಲಕನ ಉದ್ದಟತನ ದಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿರುವ ಬಗ್ಗೆ ನಿಲ್ದಾಣದ ಸಂಚಾರಿ ನಿಯಂತ್ರಕರಿಗೆ ದೂರು ನೀಡಿದ ಸಂದರ್ಭ ನಿರ್ವಾಹಕ ಅಧಿಕಾರಿಗೆ ಬೆದರಿಕೆ ಒಡ್ಡಿದ ಘಟನೆಯೂ ನಡೆಯಿತು.

ಸಂಜೆ 4 ರಿಂದ 5 ಗಂಟೆ ಸಮಯದಲ್ಲಿ ಕುಶಾಲನಗರ ಬಸ್ ನಿಲ್ದಾಣದಲ್ಲಿ ನೂರಾರು ವಿದ್ಯಾರ್ಥಿಗಳು ಶಾಲೆಯ ಪರೀಕ್ಷೆ ಮುಗಿಸಿ ಮನೆಗೆ ತೆರಳಲು ರಾಮನಗರ ಡಿಪೋಗೆ ಸೇರಿದ ಬಸ್‍ಗೆ (ಕೆಎ.ಎಫ್.1724) ಹತ್ತುವ ಸಂದರ್ಭ ನಿರ್ವಾಹಕ ಹರೀಶ್ ಅಡ್ಡಿಪಡಿಸಿದ್ದಾನೆ ಎಂದು ದೂರಿದ ವಿದ್ಯಾರ್ಥಿಗಳು ವಿಷಯವನ್ನು ನಿಲ್ದಾಣದ ನಿಯಂತ್ರಕರಿಗೆ ತಿಳಿಸಿದ ವೇಳೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಸೂಚಿಸಿದ್ದಾರೆ. ಈ ಸಂದರ್ಭ ನಿರ್ವಾಹಕ ಏಕಾಏಕಿ ಅಧಿಕಾರಿ ಯೊಂದಿಗೆ ದುರ್ವತನೆ ತೋರಿದ್ದು ಕಂಡುಬಂತು. ದಿನನಿತ್ಯ ಕುಶಾಲನಗರ ಶಾಲಾ ಕಾಲೇಜುಗಳಿಗೆ ಆಗಮಿಸುವ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿ ಯರು ಪಿರಿಯಾಪಟ್ಟಣ ಕಡೆಗೆ ತೆರಳಲು ತೊಂದರೆಯಾಗುತ್ತಿದ್ದು ರಾತ್ರಿಯಾದರೂ ಮನೆಗೆ ತಲಪಲು ಅಸಾಧ್ಯವಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದೇ ರೀತಿ ಈ ಬಸ್ ನಿರ್ವಾಹಕ ಕೊಪ್ಪ ವ್ಯಾಪ್ತಿಯಿಂದ ಪಿರಿಯಾಪಟ್ಟಣ ಕಡೆಗೆ ತೆರಳುವ ವಿದ್ಯಾರ್ಥಿಗಳನ್ನು ಬಸ್‍ಗೆ ಹತ್ತಿಸಿಕೊಳ್ಳಲು ತೊಂದರೆ ಮಾಡುತ್ತಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಸ್‍ನ ನಿರ್ವಾ ಹಕನ ಮೇಲೆ ಸಂಸ್ಥೆಯ ಅಧಿಕಾರಿಗಳು ಶಿಸ್ತು ಕ್ರಮಕೈಗೊಳ್ಳ ಬೇಕು. ವಿದ್ಯಾರ್ಥಿಗಳಿಗೆ ಬಸ್‍ನಲ್ಲಿ ತೆರಳಲು ಅಡ್ಡಿಪಡಿಸಬಾರದು ಎಂದು ಸ್ಥಳೀಯ ಪ್ರಮುಖರಾದ ನಿಡ್ಯಮಲೆ ದಿನೇಶ್ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.