ಸಿದ್ದಾಪುರ, ಮಾ. 27: ಸಿದ್ದಾಪುರ ಗ್ರಾಮ ಪಂಚಾಯಿತಿಯು ಅನಧಿಕೃತವಾಗಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿಯ ಬದಿಯಲ್ಲಿ ಮೀನು ಹಾಗೂ ಮಾಂಸ ಮಳಿಗೆ ನಿರ್ಮಾಣ ಮಾಡಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಗ್ರಾಮ ಪಂಚಾಯಿತಿಗೆ ನೋಟೀಸ್ ಜಾರಿ ಮಾಡಿದೆ. ಇತ್ತೀಚೆಗೆ ‘ಶಕ್ತಿ’ಯಲ್ಲಿ ರಸ್ತೆ ಬದಿಯಲ್ಲಿ ಮೀನು ಹಾಗೂ ಮಾಂಸ ಮಳಿಗೆ ಎಂಬ ಶಿರೋನಾಮೆಯಡಿ ಯಲ್ಲಿ ಸುದ್ದಿ ಪ್ರಕಟಗೊಂಡಿತು. ಈ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಮೀನು ಮಳಿಗೆ ತೆರೆದರೆ ಅಶುಚಿತ್ವ ತಾಂಡವಾಡುತ್ತದೆ ಎಂದು ಸ್ಥಳೀಯರು ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ವೀರಾಜಪೇಟೆ ತಾಲೂಕಿನ ಕಿರಿಯ ಅಭಿಯಂತರ ಸುಬ್ಬಯ್ಯ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯಿತಿಯು ಸಿದ್ದಾಪುರ- ಮಡಿಕೇರಿ ರಸ್ತೆಯಲ್ಲಿ ಮೀನು ಹಾಗೂ ಮಾಂಸ ಮಾರಾಟ ಮಳಿಗೆಗಳನ್ನು ವ್ಯಾಪಾರಿಗಳಿಗೆ ನಿರ್ಮಿಸಿ ಕೊಟ್ಟಿತ್ತು. ಇದು ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವಾದ ಹಿನ್ನೆಲೆಯಲ್ಲಿ ಹಾಗೂ ಈ ಮಾರ್ಗ ಕೊಣನೂರು ಮಾಕುಟ್ಟ ರಾಜ್ಯ ಹೆದ್ದಾರಿಯಾಗಿದ್ದು, ರಸ್ತೆಯಿಂದ 18 ಮೀಟರ್ ದೂರದವರೆಗೆ ಯಾವದೇ ಮಳಿಗೆಗಳನ್ನು ನಿರ್ಮಾಣ ಮಾಡಬಾರದು ಎಂದು ತಿಳಿಸಿ ಕಾಮಗಾರಿ ಸ್ಥಗಿತಗೊಳಿಸಲು ಪಿ.ಡಿ.ಓ ಅವರಿಗೆ ನೋಟೀಸ್ ಮೂಲಕ ಸೂಚನೆಯನ್ನು ನೀಡಿದ್ದಾರೆ.