ಕೂಡಿಗೆ, ಮಾ. 26: ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಹೆಲ್ಮೆಟ್ ಧರಿಸದೆ ಸಂಚಾರ ಮಾಡುವ ಹಾಗೂ ಸೂಕ್ತ ದಾಖಲಾತಿಗಳನ್ನು ಹೊಂದಿರದ ಬೈಕ್ ಸವಾರರಿಗೆ ದಂಡ ವಿಧಿಸಿ, ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸುತ್ತಿದ್ದಾರೆ.

ಕುಶಾಲನಗರದ ಪ್ರಮುಖ ರಸ್ತೆ, ಕೂಡಿಗೆ-ಹಾಸನ ರಾಜ್ಯ ಹೆದ್ದಾರಿ, ಕುಶಾಲನಗರ-ಮಡಿಕೇರಿ ರಸ್ತೆ, ಕುಶಾಲನಗರ-ಮೈಸೂರು ರಸ್ತೆಗಳಲ್ಲಿ ಹೆಚ್ಚು ಬೈಕ್ ಸಂಚರಿಸುವದರಿಂದ ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸದ ಹಾಗೂ ದಾಖಲಾತಿ ಹೊಂದದ ಎಲ್ಲಾ ಬೈಕ್ ಸವಾರರಿಗೂ ಸೂಕ್ತ ದಂಡ ವಿಧಿಸುತ್ತಿದೆ.

ಸಂಜೆ 5 ಗಂಟೆಯಿಂದ ಕುಶಾಲನಗರದ ಮುಖ್ಯ ರಸ್ತೆಯ ನಾಲ್ಕು ಕಡೆಗಳಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕುಡಿದು ವಾಹನ ಚಾಲಿಸುವರನ್ನು ತಪಾಸಣೆ ಮಾಡಿ, ದಂಡ ವಿಧಿಸುವದರ ಜೊತೆಗೆ ಪ್ರಕರಣ ದಾಖಲಿಸುವ ಕಾರ್ಯವು ನಡೆಯುತ್ತಿದೆ.

ಸಂಚಾರಿ ಪೊಲೀಸ್ ಠಾಣಾಧಿಕಾರಿ ಸೋಮೇಗೌಡ ಮಾತನಾಡಿ, ವಾಹನ ಚಾಲಕರು ಜೀವವನ್ನು ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸಿ ಸಂಚಾರ ಮಾಡುವದು ಉತ್ತಮವಾಗಿದೆ. ಇತ್ತೀಚೆಗೆ ಭಾರಿ ಅವಘಡ, ಅನಾಹುತಗಳು ಸಂಭವಿಸುತ್ತಿದ್ದು, ಹೆಲ್ಮೆಟ್ ಧರಿಸದೇ ಸಂಚಾರ ಮಾಡುವದರಿಂದ ತಲೆಗೆ ಪೆಟ್ಟು ಬಿದ್ದು ತಮ್ಮ ಜೀವವನ್ನೇ ಕಳೆದುಕೊಂಡಿರುವ ಘಟನೆಗಳು ಹೆಚ್ಚಾಗುತ್ತಿರುವದರಿಂದ, ಅಂತಹ ಅಪಘಾತಗಳನ್ನು ತಗ್ಗಿಸಲು ಸಂಚಾರಿ ಪೊಲೀಸರು ನಿಯಮ ಪಾಲಿಸದ ಬೈಕ್ ಸವಾರರಿಗೆ ಸಂಚಾರಿ ನಿಯಮ ಪಾಲಿಸುವಂತೆ ಸೂಚಿಸಿ, ದಂಡ ವಿಧಿಸಲಾಗುತ್ತಿದೆ ಎಂದರು.

-ಕೆ.ಕೆ.ನಾಗರಾಜಶೆಟ್ಟಿ