ಮಡಿಕೇರಿ, ಮಾ. 26 : ಕೊಡಗು ಜಿಲ್ಲೆಯಲ್ಲಿ ಸಾರ್ವಜನಿಕ ಮನರಂಜನೆ, ಕ್ರೀಡೆ, ಸಭೆ ಸಮಾರಂಭ, ಸಮ್ಮೇಳನ ಹಾಗೂ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಮದ್ಯ ಸೇವನೆಗೆ ಅವಕಾಶ ಕಲ್ಪಿಸುವದಕ್ಕಾಗಿ ಒಂದು ದಿನದ ಸಿಎಲ್-5 ಸಾಂದರ್ಭಿಕ ಸನ್ನದು ಪಡೆಯಲು ಕರ್ನಾಟಕ ಅಬಕಾರಿ (ಸ್ವದೇಶಿ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು, 1968ರ ನಿಯಮ 3(5)ರಲ್ಲಿ ಅವಕಾಶವಿರುತ್ತದೆ. ಅದರಂತೆ ನಿಗದಿಪಡಿಸಿರುವ ಒಟ್ಟು ಶುಲ್ಕ ರೂ. 11,500 ಗಳನ್ನು ಸರ್ಕಾರಕ್ಕೆ ಪಾವತಿಸಿ, ನಿಗದಿಪಡಿಸಿರುವ ದಾಖಲಾತಿಗಳನ್ನು ಅಬಕಾರಿ ಇಲಾಖೆಗೆ ಸಲ್ಲಿಸಿ, ಸಾಂದರ್ಭಿಕ ಸನ್ನದು ಪಡೆದುಕೊಳ್ಳಲು ತಿಳಿಸಿದೆ. ತಪ್ಪಿದಲ್ಲಿ ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿರುತ್ತದೆ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಅಬಕಾರಿ ಇಲಾಖೆಯ ಉಪ ಆಯುಕ್ತರು ಕೋರಿದ್ದಾರೆ.