ಮಡಿಕೇರಿ, ಮಾ. 26: ತನ್ನನ್ನು ಪ್ರೀತಿಸಿ, ದೂರವಾದ ಯುವತಿಯ ಬಾಳನ್ನು ಹಾಳು ಮಾಡುವ ದುರುದ್ದೇಶದಿಂದ ಪ್ರಿಯಕರ ಆಕೆಯ ಭಾವಚಿತ್ರವನ್ನು ಸ್ನೇಹಿತರ ಸಹಕಾರದೊಂದಿಗೆ ಅಸಹ್ಯಕರವಾಗಿ ಎಡಿಟ್ ಮಾಡಿ ವಾಟ್ಸ್ಯಾಪ್ ಗ್ರೂಪ್‍ನಲ್ಲಿ ಹರಿಯ ಬಿಟ್ಟು ಅವಮಾನ ಮಾಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಸೈಬರ್ ಕ್ರೈಮ್ ಪೊಲೀಸರು ಗ್ರೂಪ್ ಅಡ್ಮಿನ್‍ನನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಪ್ರಿಯಕರ ಹಾಗೂ ಮತ್ತೋರ್ವ ಯುವಕನಿಗಾಗಿ ಬಲೆ ಬೀಸಿದ್ದಾರೆ.ವೀರಾಜಪೇಟೆ ಗ್ರಾಮಾಂತರ ವ್ಯಾಪ್ತಿಯ ಯುವತಿಯೊಬ್ಬಳು ಕಾಲೇಜಿಗೆ ತೆರಳುತ್ತಿದ್ದ ವೇಳೆ ಸಮೀಲ್ ಎಂಬ ಯುವಕನೋರ್ವನ ಜೊತೆ ಆಕೆಗೆ ಪ್ರೇಮಾಂಕುರವಾಗಿತ್ತು. ಈ ವಿಚಾರ ತಿಳಿದ ಯುವತಿಯ ಪೋಷಕರು ಯುವಕನನ್ನು ಸಂಪರ್ಕಿಸಿ ಪ್ರೀತಿಗೆ (ಮೊದಲ ಪುಟದಿಂದ) ವಿರೋಧವೊಡ್ಡಿದ್ದರು. ಇದರಿಂದಾಗಿ ಯುವತಿ ಸಮೀಲ್‍ನಿಂದ ದೂರವಾಗಿದ್ದಳು. ಈ ನಡುವೆ ದುಬೈನಲ್ಲಿರುವ ಸಮೀಲ್ ತಾನು ಪ್ರೀತಿಸಿದ ಯುವತಿಯ ಬಾಳನ್ನು ಹಾಳು ಮಾಡುವ ದುರುದ್ದೇಶದಿಂದ ಆಕೆಯ ಕೆಲವು ಭಾವಚಿತ್ರಗಳನ್ನು ಆತನ ಸ್ನೇಹಿತರಿಗೆ ಕಳುಹಿಸಿದ್ದ.ಅಸಹ್ಯಕರವಾಗಿ ‘ಎಡಿಟ್’ ಮಾಡಿದ್ದ ಯುವತಿಯ ಭಾವಚಿತ್ರವನ್ನು ಚಿಟ್ಟಡೆಯ ರಶೀದ್ ಎಂಬಾತ ವಾಟ್ಸ್ಯಾಪ್ ಗ್ರೂಪ್‍ನಲ್ಲಿ ಹರಿಯಬಿಟ್ಟಿದ್ದಾನೆ. ಈ ಬಗ್ಗೆ ಯುವತಿಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಮಡಿಕೇರಿ ಸೈಬರ್ ಕ್ರೈಂ ಪೊಲೀಸರು ಗ್ರೂಪ್‍ನ ಅಡ್ಮಿನ್ ಕಡಂಗದ ಇಲಿಯಾಸ್ ಎಂಬಾತನನ್ನು ಬಂಧಿಸಿದ್ದು, ಆತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಸಮೀಲ್ ಹಾಗೂ ರಶೀದ್ ಎಂಬವರುಗಳು ತಲೆ ಮರೆಸಿಕೊಂಡಿದ್ದು, ಅವರುಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಎಸ್‍ಪಿ ಸುಮನ್ ಅವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಇನ್ಸ್‍ಪೆಕ್ಟರ್ ಹರೀಶ್‍ಕುಮಾರ್, ಮುಖ್ಯ ಪೇದೆಗಳಾದ ಎಂ.ಪಿ. ಕಾರ್ಯಪ್ಪ, ಪ್ರಕಾಶ್, ಸಿಬ್ಬಂದಿ ಮಧು, ಚಾಲಕ ಸುಜಿತ್ ಇವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇತ್ತೀಚೆಗೆ ಇಂತಹ ಪ್ರಕರಣಗಳ ಜೊತೆಗೆ, ಎಟಿಎಂ ಪಡೆದು ಸಂಖ್ಯೆ ಬಳಸಿ ಹಣ ಲಪಟಾಯಿಸುತ್ತಿರುವ ಬಗ್ಗೆಯೂ ದೂರುಗಳು ಕೇಳಿಬರುತ್ತಿದ್ದು, ಜನತೆ ಎಚ್ಚರ ವಹಿಸುವಂತೆ ಸೈಬರ್ ಕ್ರೈಂ ಪೊಲೀಸರು ಮನವಿ ಮಾಡಿದ್ದಾರೆ.