ಕುಶಾಲನಗರ, ಮಾ. 26: ಪರರ ಸಂಕಷ್ಟಕ್ಕೆ ಕೈಜೋಡಿಸುವ ಜನರು ಚಿರಂಜೀವಿಗಳಾಗುತ್ತಾರೆ ಎಂದು ಅಂತಾರ್ರಾಷ್ಟ್ರೀಯ ಅಥ್ಲಿಟ್ ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಆಶ್ರಯದಲ್ಲಿ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ಅವರು ಬರೆದ 'ಪ್ರಕೃತಿ ಮುನಿದ ಹಾದಿಯಲ್ಲಿ' ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸಾಧಕರು ಇತರರನ್ನು ಬೆಳೆಸುವಂತಾಗ ಬೇಕು. ಪ್ರಕೃತಿಯ ಆರಾಧನೆಯೊಂದಿಗೆ ಪ್ರತಿಯೊಬ್ಬರೂ ಛಲದ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದ ಅರ್ಜುನ್ ದೇವಯ್ಯತನಗೋಸ್ಕರ ಬದುಕುವ ವ್ಯಕ್ತಿ ಸತ್ತಾಗ ಮಣ್ಣಲ್ಲಿ ಮಣ್ಣಾಗುತ್ತಾನೆ. ಇತರರಿಗೋಸ್ಕರ ತನ್ನ ಬದುಕನ್ನು ಸವೆಸುವವನು ಸದಾ ಸಮಾಜದ ನೆನಪಿನಲ್ಲಿರುತ್ತಾನೆ ಎಂದರು.ಪುಸ್ತಕ ಬಿಡುಗಡೆಗೊಳಿಸಿ ಮಾತ ನಾಡಿದ ಎಸ್‍ಪಿ ಡಾ. ಡಿ.ಪಿ. ಸುಮನ್, ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಸಕರಾತ್ಮಕ ವರದಿಗಳು ಪರಿಹಾರ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಟ್ಟಿತು ಅಲ್ಲದೆ ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ವಾಸ್ತವಾಂಶ ತಿಳಿಸುವಲ್ಲಿ ಕೈಜೋಡಿಸಿದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಪ್ರಕೃತಿ ವಿಕೋಪ ಸಂದರ್ಭ ಜಿಲ್ಲೆಯ ಪತ್ರಕರ್ತರು ತಮ್ಮ ವರದಿಗಾರಿಕೆಯ ಜವಾಬ್ದಾರಿ ಜೊತೆಗೆ ಮಾನವೀಯತೆಯ ನೆಲೆಯಲ್ಲಿ ಸಾಮಾಜಿಕ ಕಾಳಜಿ ಮೆರೆದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯ ಕ್ರಮವನ್ನು ದೀಪ ಬೆಳಗುವ ಮೂಲಕ ಸಂvಸ್ತರಾದ ಹೆಮ್ಮೆತ್ತಾಳು ಗ್ರಾಮದ ಚಂದುಗೋಪಾಲ್ ದಂಪತಿಗಳು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಫ್.ಎಂ.ಸಿ. ಕಾಲೇಜು ಪ್ರಾಂಶುಪಾಲ ಪ್ರೊ. ಟಿ.ಡಿ. ತಿಮ್ಮಯ್ಯ ಮಾತನಾಡಿ, ಸುಸ್ಥಿರ ಅಭಿವೃದ್ಧಿಗೆ ಮಹತ್ವ ನೀಡಿದ್ದಲ್ಲಿ ಪ್ರಾಕೃತಿಕ ವಿಕೋಪಗಳಿಂದ ಆಗುವ ಅನಾಹುತಗಳಿಂದ ಪಾರಾಗಬಹುದು ಎಂದು ಸಲಹೆ ನೀಡಿದರು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿದ್ದ ನಾಗರಿಕರ ಪರವಾಗಿ ರವಿ ತಮ್ಮ ಅನುಭವ ಹಂಚಿಕೊಂಡರು. ಇದೇ ಸಂದರ್ಭ ಸೋಮವಾರಪೇಟೆ ಅಗ್ನಿಶಾಮಕ ತಂಡದ ಚೇತನ್ ಕುಮಾರ್ ಮತ್ತು ಲಕ್ಷ್ಮಿಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು. ಎಂ.ಎ ಅಜೀಜ್ ಸ್ವಾಗತಿಸಿದರು. ಲೇಖಕ ಕಿಶೋರ್ ರೈ ಕತ್ತಲೆಕಾಡು ಪ್ರಾಸ್ತಾವಿಕ ನುಡಿಗಳಾಡಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಎಫ್.ಎಂ.ಸಿ. ಕಾಲೇಜು ಉಪನ್ಯಾಸಕಿ ಡಾ. ನಯನಾ ಕಶ್ಯಪ್, ಟ್ರಾವೆಲ್ ಕೂರ್ಗ್ ಸಂಸ್ಥೆ ಮುಖ್ಯಸ್ಥ ಚೆಯ್ಯಂಡ ಸತ್ಯ ವೇದಿಕೆಯಲ್ಲಿದ್ದರು.