ವೀರಾಜಪೇಟೆ, ಮಾ. 26: ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿ ಒಕ್ಕೂಟ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ

ತಾ. 29 ಮತ್ತು 30 ರಂದು ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ, ಅಶ್ವಿನಿ ಅಚ್ಚಪ್ಪ ಸ್ಮಾರಕ ರಾಜ್ಯಮಟ್ಟದ ಅಂತರ ಕಾಲೇಜು 7 ಆಟಗಾರರ ಹಾಕಿ ಹಾಗೂ ಬಾಸ್ಕೆಟ್ ಬಾಲ್ ಪಂದ್ಯಾಟವನ್ನು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲಾಕ್ಷಿ ಅವರು ಆಲ್ಕೇಮಿ ಕಾಫಿ ರೋಸ್ವರ್ಸ್ ಮಾಲೀಕ ಅಚ್ಚಪ್ಪ ಅವರ ಮಗ ಬೋಪಣ್ಣ ಅವರು ತಮ್ಮ ತಂದೆ, ತಾಯಿ ಸ್ಮಾರಕವಾಗಿ ಪಂದ್ಯಾಟಗಳಿಗೆ ಪ್ರಾಯೋಜಕತ್ವ ನೀಡಿದ್ದಾರೆ. ತಾ. 29 ರಂದು ನಡೆಯುವ ಪಂದ್ಯಾಟವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೆರ ಕುಶಾಲಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಬಾಸ್ಕೆಟ್‍ಬಾಲ್ ಆಟಗಾರ್ತಿ ಕಾಡ್ಯಮಾಡ ದೇಚಮ್ಮ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್, ಪ್ರಣಿತಾ ಪೂಣಚ್ಚ, ಸೋಮೆಯಂಡ ಪೂಣಚ್ಚ ಉಪಸ್ಥಿತರಿರುವರು.

ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕಿ ಡಾ: ಎಂ.ಎಂ. ದೇಚಮ್ಮ ಮಾತನಾಡಿ ತಾ. 30 ರಂದು ನಡೆಯುವ ಫ್ಯೆನಲ್ಸ್ ಪಂದ್ಯಾಟಕ್ಕೆ ಹಿರಿಯರಾದ ನಾಯಡ ವಾಸು ನಂಜಪ್ಪ, ಕೊಡಗು ಫುಟ್‍ಬಾಲ್ ಅಸೊಸಿಯೇಷನ್‍ನ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಕಾವೇರಿ ವಿದ್ಯಾಸಂಸ್ಥೆಯ ನಿರ್ದೇಶಕ ಪ್ರೊ. ಇಟ್ಟಿರ ಬಿದ್ದಪ್ಪ, ಜಿಲ್ಲಾ ಹಾಕಿ ತೀರ್ಪುಗಾರರ ಸಂಘದ ಮಾಜಿ ಅಧ್ಯಕ್ಷ ಬಡಕಡ ದೀನಾ ಪೂವಯ್ಯ, ಕಾಲೇಜಿನ ಹಳೆಯ ವಿದ್ಯಾರ್ಥಿನಿ ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಮನಿಯಪಂಡ ದೇಚಮ್ಮ ಕಾಳಪ್ಪ, ಉಪಸ್ಥಿತರಿರುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್, ಕ್ರೀಡಾ ಸಂಚಾಲಕ ಪುಚ್ಚಿಮಂಡ ಕಿರಣ್ ಕಾರ್ಯಪ್ಪ, ಕರ್ವಂಡ ತಿಮ್ಮಯ್ಯ ಉಪಸ್ಥಿತರಿದ್ದರು.