ಕುಶಾಲನಗರ, ಮಾ. 26 : ಕುಶಾಲನಗರ ಸಮೀಪ ಹೆರೂರು ಬಳಿ ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶ ಪ್ರವಾಸಿಗರ ಮೋಜು ಮಸ್ತಿಗಳಿಂದ ಬಹುತೇಕ ತ್ಯಾಜ್ಯಗಳ ವಿಲೇವಾರಿ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ವಾರಾಂತ್ಯದಲ್ಲಿ ಸ್ಥಳೀಯರು ಸೇರಿದಂತೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡುತ್ತಿದ್ದು, ಈ ಪ್ರದೇಶದಲ್ಲಿ ಯಾವದೇ ಎಗ್ಗಿಲ್ಲದೆ ಮೋಜು ಮಸ್ತಿ ನಡೆಯುತ್ತಿದೆ. ಬಹುತೇಕ ಮಂದಿ ಈ ಹಿನ್ನೀರು ಪ್ರದೇಶವನ್ನು ಅಡುಗೆ ಕೇಂದ್ರವಾಗಿ ಬಳಸುತ್ತಿದ್ದು ಇದರಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಇಲ್ಲೇ ಎಸೆದು ಹೋಗುತ್ತಿರುವದು ಸಾಮಾನ್ಯವಾಗಿದೆ.

ಕಳೆದ 10 ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ ರಿಯಾಲಿಟಿ ಶೋ ತಂಡವೊಂದು ಎರಡು, ಮೂರು ದಿನಗಳ ಕಾಲ ಇಲ್ಲೇ ಠಿಕಾಣಿ ಹೂಡಿದ್ದು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಹಾಕಿರುವದು ಕಂಡುಬಂದಿದೆ. ಇಂತಹ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕುಶಾಲನಗರ ಪ್ರಮುಖರಾದ ಅನೀಶ್ ಪತ್ರಿಕೆ ಮೂಲಕ ಕೋರಿದ್ದಾರೆ.

ಮಳೆಗಾಲದಲ್ಲಿ ಈ ತ್ಯಾಜ್ಯಗಳು ಜಲಾಶಯದ ನೀರಿನಲ್ಲಿ ಸೇರಿಕೊಳ್ಳುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಪರಿಸರ ಹಾನಿಯಾಗುವದರೊಂದಿಗೆ ಅನಾಹುತಗಳು ಸೃಷ್ಟಿಯಾಗುವ ಸಾಧ್ಯತೆಗಳೂ ಇದೆ. ಈಗಾಗಲೆ ಹಾರಂಗಿ ಜಲಾಶಯದಲ್ಲಿ ಬಹುತೇಕ ಪ್ರಮಾಣದಲ್ಲಿ ಹೂಳು ತುಂಬಿದ್ದು ಇದೀಗ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಅಧಿಕ ಎಂದು ನಾಗರಿಕರು ದೂರಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಿಸಿ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.

-ಸಿಂಚು