ಮಡಿಕೇರಿ, ಮಾ. 26: ತಾ. 19 ರಂದು ಮೇಕೇರಿ - ಭಾಗಮಂಡಲ ಮಾರ್ಗದ ನಡುವೆ ತಾಳತ್‍ಮನೆ ಸಮೀಪದ ಬಾಲಚಂದ್ರ ಕಳಗಿ ಅವರ ಕಾರಿಗೆ ಲಾರಿ ಡಿಕ್ಕಿಯಾಗಿ; ಅವರು ನಿಗೂಢ ಸಾವನ್ನಪ್ಪಿರುವ ಪ್ರಕರಣ ಇದೀಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಸಂಪಾಜೆಯ ದಂಪತಿ ದುರ್ಘಟನೆಗೆ ಮುನ್ನ ಆ ದಿವಸ ಅರಸಿಕಟ್ಟೆಗೆ ಹೋಗಿ ಹರಕೆ ತೀರಿಸಿ ಬಂದಿರುವದು ಬಹಿರಂಗಗೊಂಡಿದೆ.ಪೊಲೀಸರ ತನಿಖೆ ವೇಳೆ ಈ ಅಂಶವನ್ನು ಬಾಯಿ ಬಿಟ್ಟಿರುವ ದಂಪತಿ; ತಾ. 16 ರಂದು ತಾವು ಅರಸಿಕಟ್ಟೆಗೆ ಹೋಗಿ ಹರಕೆ ತೀರಿಸಿ ಬರುವದಾಗಿ ಬಾಲಚಂದ್ರ ಕಳಗಿ ಬಳಿ ಹೇಳಿಕೊಂಡಿದ್ದರೆನ್ನಲಾಗಿದೆ. ಈ ವೇಳೆ ಸ್ವತಃ ಕಳಗಿ ಅವರು ಶನಿವಾರ ಬೇಡ; ಸೋಮವಾರ ಹೋಗೋಣ ಎಂದಿದ್ದರಂತೆ. ಅನಂತರದಲ್ಲಿ ತಾ. 18 ರಂದು ಸಂಪಾಜೆ ಹಾಗೂ ಪೆರಾಜೆಗೆ ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ಅವರ ಪ್ರವಾಸದಿಂದಾಗಿ ಕಾರ್ಯಕ್ರಮವನ್ನು ತಾ. 19ಕ್ಕೆ ಮುಂದೂಡಿದರು.

ಅಂದು ಕೂಡ ಬಾಲಚಂದ್ರ ಕಳಗಿ ಬಿಜೆಪಿ ಕಾರ್ಯ ಕರ್ತರ ಸಭೆಗಳಲ್ಲಿ ಪಾಲ್ಗೊಳ್ಳಲು ಮಡಿಕೇರಿಗೆ ಹೋಗಿ ದ್ದಾಗಿ ಕುಟುಂಬಸ್ಥರು ಭಾವಿಸಿದ್ದಾರೆ.

(ಮೊದಲ ಪುಟದಿಂದ) ಬದಲಾಗಿ ಅವರು ಸಂಪಾಜೆಯ ಈ ದಂಪತಿ ಮಡಿಕೇರಿಯಿಂದ ತಮ್ಮ ಕಾರಿನಲ್ಲೇ ಅರಸಿಕಟ್ಟೆಗೆ ಕರೆದೊಯ್ದಿರುವದು ಖಚಿತವಾಗಿದೆ. ಅರಸಿಕಟ್ಟೆಯಲ್ಲಿ ಪೂಜೆ ಮುಗಿಸಿಕೊಂಡು; ಕುಶಾಲನಗರದಲ್ಲಿ ಬಂದು ಊಟ ಮುಗಿಸಿ ಮಡಿಕೇರಿಗೆ ಬಂದಿದ್ದಾರೆ. ನಗರದ ಸುದರ್ಶನ ವೃತ್ತದಿಂದ ತನ್ನ ಕಾರನ್ನು ತೆಗೆದುಕೊಂಡು ಬಿಜೆಪಿ ಕಚೇರಿಯತ್ತ ಆಗಮಿಸಿರುವ ಚಾಲಚಂದ್ರ ಕಳಗಿ ಮೇಕೇರಿ ಗೌರಿಶಂಕರ ದೇವಾಲಯ ಬಳಿ ತೆರಳಿ ಅಲ್ಲಿ ಕಾರನ್ನು ಮಾರ್ಗ ಬದಿ ನಿಲ್ಲಿಸಿದ್ದಾರೆ.

ಮತ್ತೆ ಅಲ್ಲಿಂದ ಸಂಪಾಜೆಯ ದಂಪತಿಯೊಂದಿಗೆ ಮೂರ್ನಾಡು ಪೀಠೋಪಕರಣ ಮಳಿಗೆಗೆ ಅವರ ಕಾರಿನಲ್ಲಿ ತೆರಳಿ; ಪೀಠೋಪಕರಣ ನೋಡಿಕೊಂಡು ಮರಳಿ ಮೇಕೇರಿಗೆ ಹಿಂತಿರುಗಿದ್ದಾರೆ. ಅಲ್ಲಿನ ರಸ್ತೆ ತಿರುವೊಂದರ ಪುಟ್ಟ ಕ್ಯಾಂಟೀನ್‍ನಲ್ಲಿ ಚಹಾ ಸೇವಿಸಿದ್ದಾರೆ. ಮರು ಘಳಿಗೆಯಲ್ಲಿ ಲಾರಿ - ಕಾರು ಡಿಕ್ಕಿ ಸಂಭವಿಸುವ ಮುನ್ನ ದಂಪತಿಯ ವಾಹನ 50 ರಿಂದ 60 ಮೀ. ಅಂತರದಲ್ಲಿ ಕಳಗಿ ಕಾರಿಗಿಂತ ಮುಂದೆ ಸಾಗಿದ್ದು, ಲಾರಿಯು ಹಿಂದೆ ಬರುತ್ತಿದ್ದ ಕಳಗಿ ಅವರ ವಾಹನಕ್ಕೆ ಡಿಕ್ಕಿಯಾದ ಶಬ್ದ ಕೇಳಿಸಿದ್ದಾಗಿ ದಂಪತಿಯೇ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆ ಕೂಡಲೇ ತಮ್ಮ ವಾಹನ ನಿಲ್ಲಿಸಿ ಘಟನೆ ಸ್ಥಳಕ್ಕೆ ಹಿಂತೆರಳಿದ್ದಾಗಿ ಹೇಳಿಕೊಂಡಿದ್ದಾರೆ.

ಅಲ್ಲದೆ ಗಂಡ ಕಳಗಿ ಅವರ ಮೊಬೈಲ್ ಹಾಗೂ ಇತರ ದಾಖಲೆಗಳನ್ನು ತೆಗೆದುಕೊಂಡು ಆತನ ಕಾರಿನೊಳಗೆ ಇರಿಸಿಕೊಂಡಿದ್ದಾರೆ. ಅಷ್ಟರಲ್ಲಿ ಹೊದ್ದೂರು ಯುವಕರು ತಮ್ಮ ಕಾರಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದು, ಮೇಕೇರಿ ಬಳಿ ನರ್ಸರಿಯ ಕೆಲಸ ಮಾಡುತ್ತಿದ್ದ ಕೆಲವರು ಸಹಕರಿಸಿದ್ದಾರೆ. ನಂತರ ದಂಪತಿಯೊಂದಿಗೆ ಜ. ತಿಮ್ಮಯ್ಯ ವೃತ್ತಕ್ಕೆ ಬಂದು ಪತ್ನಿಯನ್ನು ಬಸ್‍ನಲ್ಲಿ ಕಳುಹಿಸಿದ್ದಾರೆ.

ಮತ್ತಷ್ಟು ಶಂಕೆ : ಮೃತರ ತಂದೆ ವೆಂಕಪ್ಪ ಕಳಗಿ ಹಾಗೂ ಪತ್ನಿ ರಮಾದೇವಿ ಸಹಿತ ಬಾಲಚಂದ್ರ ಕಳಗಿ ಕುಟುಂಬ ಸಾವಿನಿಂದ ಆಘಾತಗೊಂಡಿದ್ದು, ಸಂಪಾಜೆಯ ಅಕ್ರಮ ದಂಧೆಕೋರರ ಸಹಿತ ವ್ಯವಸ್ಥಿತ ಸಂಚು ರೂಪಿಸಿ, ಕೊಲೆ ಮಾಡಲಾಗಿದೆ ಎಂದು ‘ಶಕ್ತಿ’ ಯೊಂದಿಗೆ ನೋವು ತೋಡಿಕೊಂಡಿದ್ದಾರೆ. ಮಗ ಬಿಜೆಪಿ ಸಭೆಗೆ ಹೋಗಿರಬಹುದು ಎಂದು ನಂಬಿದ್ದಾಗಿ ತಂದೆ ನುಡಿದರೆ, ಅರಸಿಕಟ್ಟೆಗೆ ತೆರಳಿರುವ ಕುರಿತು ಗೊತ್ತಿರಲಿಲ್ಲವೆಂದು ಪತ್ನಿ ಪ್ರತಿಕ್ರಿಯಿಸಿದ್ದಾರೆ.

ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮದ್ಯ ದಂಧೆಯ ಬಾರ್ ಹಾಗೂ ಜೂಜು ಅಡ್ಡೆಯ ಕ್ಲಬ್ ಇತ್ಯಾದಿ ಯಾವ ಕಾರಣಕ್ಕೂ ತೆರೆಯಲು ಬಿಡುವದಿಲ್ಲವೆಂದು ಬಾಲಚಂದ್ರ ಕಳಗಿ ಗ್ರಾ.ಪಂ. ಅಧ್ಯಕ್ಷರಾಗಿದ್ದ ವೇಳೆಯೂ ಶಪಥ ಮಾಡಿದ್ದರಂತೆ. ಇಂತಹ ಅಡ್ಡೆಗಾಗಿ ಹಾತೊರೆಯುತ್ತಿದ್ದವರೇ ಹಲವರನ್ನು ಪ್ರಚೋದಿಸಿ ಕೊಲೆ ಮಾಡಲು ಸಂಚು ರೂಪಿಸಿರಬಹುದು ಎಂಬ ಗುಮಾನಿ ನೊಂದ ಕುಟುಂಬದ್ದಾಗಿದೆ.

ಹೀಗಾಗಿ ಬಾಲಚಂದ್ರ ಕಳಗಿ ಸಾವಿಗೆ ನ್ಯಾಯ ಸಿಗುವ ತನಕ ವಿರಮಿಸುವದಿಲ್ಲವೆಂದೂ, ಭವಿಷ್ಯದಲ್ಲಿ ಯಾರಿಗೂ ಇಂತಹ ಸಾವು ಎದುಗಾರದಂತೆ ಪೊಲೀಸ್ ಇಲಾಖೆ ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆದು ಆರೋಪಿಗಳನ್ನು ಶಿಕ್ಷಿಸಬೇಕೆಂದು ಬಯಸುವದಾಗಿ ಕಳಗಿ ಕುಟುಂಬಸ್ಥರು ಮತ್ತು ಬಿಜೆಪಿಯ ಸಂಪಾಜೆ ವ್ಯಾಪ್ತಿಯ ಪ್ರಮುಖರು ಪ್ರತಿಕ್ರಿಯಿಸಿದ್ದಾರೆ.