ಮಡಿಕೇರಿ, ಮಾ. 26: ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಒಟ್ಟು 30 ಮಂದಿ ಅಭ್ಯರ್ಥಿಗಳು 50 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ನಾಮಪತ್ರ ಹಿಂಪಡೆಯಲು ತಾ. 29 ಕೊನೆಯ ದಿನವಾಗಿದ್ದು ಆ ಬಳಿಕವಷ್ಟೆ ಕಣದಲ್ಲಿ ಉಳಿದವರ ಅಧಿಕೃತ ಪಟ್ಟಿ ಪ್ರಕಟಗೊಳ್ಳಲಿದೆ. ಬಿ.ಜೆ.ಪಿ ಹಾಗೂ ಕಾಂಗ್ರೆಸ್-ಜೆ.ಡಿ.ಎಸ್ ಮೈತ್ರಿಕೂಟದ ರಾಷ್ಟ್ರೀಯ ಪಕ್ಷಗಳ ನಡುವಿನ ಇಬ್ಬರು ಅಭ್ಯರ್ಥಿಗಳ ಪ್ರಬಲ ಪೈಪೋಟಿ ನಡುವೆ ಇತರ ಕೆಲವು ರಾಜಕೀಯ ಪಕ್ಷಗಳ 8 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಕೊಡಗಿನ ಕೆಲವು ವ್ಯಕ್ತಿಗಳೂ ಸೇರಿದಂತೆ ಇದುವರೆಗೆ ಒಟ್ಟು 20 ಮಂದಿ ಪಕ್ಷೇತರ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದಾರೆ. ತಾ. 27 (ಇಂದು) ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.