ಮಡಿಕೇರಿ, ಮಾ. 26: 2018ರ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಹಲವರ ಅಗತ್ಯತೆಯನ್ನು ಪರಿಗಣಿಸಿ ಬೆಂಗಳೂರು ಕೊಡವ ಸಮಾಜದ ಮೂಲಕ ಸಂಗ್ರಹಿಸಿದ ನೆರವನ್ನು ನಿನ್ನೆ ವಿತರಿಸಲಾಯಿತು. ನಿನ್ನೆ ಬೆಂಗಳೂರು ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 355 ಮಂದಿಗೆ ರೂ. 2.50 ಕೋಟಿಯಷ್ಟು ಮೊತ್ತವನ್ನು ನೀಡಿ ಸ್ಪಂದಿಸಲಾಯಿತು.ದುರಂತ ಸಂಭವಿಸಿದ ಸಂದರ್ಭ ದಲ್ಲಿ ಬೆಂಗಳೂರು ಸಮಾಜವೂ ನೊಂದವರಿಗೆ ಸಹಕರಿಸಲು ಮುಂದಾಗಿದ್ದು, ಈ ಪ್ರಯತ್ನಕ್ಕೆ ಉತ್ತಮ ಸ್ಪಂದನ ದೊರೆತಿತ್ತು. ಸುಮಾರು 67 ಟ್ರಕ್ ಲೋಡ್‍ನಷ್ಟು ಸಾಮಗ್ರಿಗಳು ಸಂಗ್ರಹಗೊಂಡು ಅದನ್ನು ಜಿಲ್ಲೆಗೆ ರವಾನಿಸಲಾಗಿತ್ತು. ಬಳಿಕ ಆರ್ಥಿಕವಾಗಿ ಸಹಕಾರ ನೀಡುವ ನಿಟ್ಟಿನಲ್ಲಿ ಆಗಿನ ಆಡಳಿತ ಮಂಡಳಿ ನಿವೃತ್ತ ಮೇಜರ್ ಜನರಲ್ ಕೊಡಂದೆರ ಅರ್ಜುನ್ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಆಡಳಿತ ಮಂಡಳಿಯ ಕೆಲವರು ಸೇರಿದಂತೆ 21 ಮಂದಿಯ ವಿಶೇಷ ತಂಡವನ್ನು ರಚಿಸಲಾಗಿತ್ತು.ಜಿಲ್ಲೆಯ ಜನತೆಯಿಂದ ಬಂದಿದ್ದ ಮನವಿಯನ್ನು ಪರಿಗಣಿಸುವದ ರೊಂದಿಗೆ ಈ ತಂಡದ ಸದಸ್ಯರು ದುರಂತ (ಮೊದಲ ಪುಟದಿಂದ) ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿ ನೈಜ ಅಗತ್ಯತೆಯಿರುವವರ ಮಾಹಿತಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿತ್ತು. ಇದೀಗ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ನಿನ್ನೆ ನಡೆದ ಸರಳ ಕಾರ್ಯಕ್ರಮದಲ್ಲಿ 355 ಮಂದಿಗೆ ರೂ. 2.50 ಕೋಟಿ ಹಣವನ್ನು ವಿತರಣೆ ಮಾಡಲಾಗಿದೆ. ಕೇವಲ ಕೊಡವ ಜನಾಂಗದವರು ಮಾತ್ರವಲ್ಲದೆ, ದುರಂತದಿಂದ ಸಮಸ್ಯೆಗೆ ಒಳಗಾಗಿದ್ದ ಇತರರಿಗೂ ನೆರವು ನೀಡಲಾಗಿದೆ. ಜಿಲ್ಲೆಯಿಂದ ಬೆಂಗಳೂರಿಗೆ ಆಗಮಿಸಲು ವೆಚ್ಚ ಹಾಗೂ ಊಟದ ವ್ಯವಸ್ಥೆಯನ್ನೂ ಕಲ್ಪಿಸುವದರೊಂದಿಗೆ ಪರಿಹಾರ ಮೊತ್ತವನ್ನು ನೀಡಲಾಗಿದೆ. ಸಮಾಜದ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಮಾತನಾಡಿದ ಅವರು ಹಾಗೂ ಸಮಾಜದ ಉಪಾಧ್ಯಕ್ಷೆ ಮಲ್ಲೇಂಗಡ ಮೀರಾಜಲಜಕುಮಾರ್ ಅವರು ಆ ಸಂದರ್ಭದಲ್ಲಿ ಸಮಾಜ ನಡೆಸಿದ್ದ ಪ್ರಯತ್ನದ ಕುರಿತು ಮಾಹಿತಿ ನೀಡಿದರು. ಕೊಡವ ಜನಾಂಗದವರ ಅತಿಥಿ ಸತ್ಕಾರದ ಗುಣ ಹಾಗೂ ಕೊಡಗಿನ ಮೇಲಿನ ಅಭಿಮಾನದಿಂದ ಹಲವಷ್ಟು ಮಂದಿ ನೆರವು ನೀಡಿದ್ದಾರೆ. ಪುಟ್ಟ ಬಾಲಕಿಯೊಬ್ಬಳು ತಾನು ಸಂಗ್ರಹಿಸಿದ್ದ ಹುಂಡಿ ಹಣವನ್ನು ನೀಡಿದ್ದು, ಆಟೋ ಚಾಲಕರೊಬ್ಬರು ಅವರ ದಿನದ ದುಡಿಮೆಯನ್ನು ನೀಡಿದ್ದು, ಸೇರಿದಂತೆ ಹಲವಷ್ಟು ಜನರು ಹಾಗೂ ಸಂಘ - ಸಂಸ್ಥೆಗಳು ನೆರವು ನೀಡಿವೆ ಎಂದು ಸ್ಮರಿಸಿದ ಮೀರಾಜಲಜಕುಮಾರ್ ಅವರು ಆ ಸಂದರ್ಭದಲ್ಲಿ ಯುವ ಜನಾಂಗದವರು ಪಟ್ಟ ಪರಿಶ್ರಮ ಹಾಗೂ ಸಂತ್ರಸ್ತ ಪರಿಹಾರ ನಿಧಿ ಕ್ರೋಢೀಕರಣ ಸಮಿತಿಯ ಅಧ್ಯಕ್ಷ ಅರ್ಜುನ್ ಮುತ್ತಣ್ಣ ಹಾಗೂ ತಂಡದವರ ಪ್ರಯತ್ನವನ್ನು ಈ ಸಂದರ್ಭ ವಿವರಿಸಲಾಯಿತು. ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ ಅವರು ಇದಕ್ಕಾಗಿ ನಡೆಸಿದ್ದ ಪ್ರಯತ್ನದ ಕುರಿತು ವಿವರವಿತ್ತರು.

ಸಮಾಜದ ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ ಸ್ವಾಗತಿಸಿ, ಮೀರಾಜಲಜಕುಮಾರ್ ವಂದಿಸಿದರು. ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.