ಸೋಮವಾರಪೇಟೆ, ಮಾ. 26: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿದರೆ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲವು ಸಾಧ್ಯವಾಗುತ್ತದೆ. ಈ ಹಿನ್ನೆಲೆ ಜೆಡಿಎಸ್ ಮುಖಂಡ ಜೀವಿಜಯ ಮತ್ತು ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಭಿಪ್ರಾಯಿಸಿದರು.ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕೊಡಗಿನ ಪ್ರವಾಹ ಸಂದರ್ಭ ಸಂಸದ ಪ್ರತಾಪ್‍ಸಿಂಹ ಅವರು ಯಾವದೇ ಸ್ಪಂದನೆ ತೋರಿಲ್ಲ. ಕೇಂದ್ರದಿಂದ ಯಾವದೇ ಪರಿಹಾರ ಒದಗಿಸಿಲ್ಲ. ಕೊಡಗಿನ ಜನತೆಯ ಸಮಸ್ಯೆಗೆ ಸ್ಪಂದಿಸಿಲ್ಲ ಎಂದರು. ಕಾರ್ಯಕರ್ತರು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಬೇಕೆಂದರು.

ಕೊಡಗು ಕಾಂಗ್ರೆಸ್ ಉಸ್ತುವಾರಿ ವೆಂಕಪ್ಪ ಗೌಡ ಮಾತನಾಡಿ, ಮೈತ್ರಿ ಸರ್ಕಾರ ಲವ್ ಮ್ಯಾರೇಜ್ ಅಲ್ಲ; ಅರೇಂಜ್ಡ್ ಮ್ಯಾರೇಜ್ ಆಗಿದೆ. ಸಂಸಾರಕ್ಕೆ ಯಾವದೇ ತೊಂದರೆ ಯಿಲ್ಲವೆಂದರು. ಜೆಡಿಎಸ್‍ನಲ್ಲಿ ಪ್ರಭಾವ ಹೊಂದಿರುವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ಬಾರಿ ಚುನಾವಣೆ ಸೋತರೆ ಮುಂದೆ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ಮಾಡು ಇಲ್ಲವೇ ಮಡಿ ಎಂಬಂತೆ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್

(ಮೊದಲ ಪುಟದಿಂದ) ಮಾತನಾಡಿ, ಹಿಂದುತ್ವ ಮತ್ತು ಮೋದಿ ಮಾತ್ರ ಬಿಜೆಪಿಯ ಅಜೆಂಡಾ. ಕೊಡಗಿನಲ್ಲಿ ರೈತರ ಪರಿಸ್ಥಿತಿ ಹದಗೆಟ್ಟಿದ್ದರೆ ಪ್ರವಾಸೋದ್ಯಮ ಸೊರಗಿದೆ. ರೈತರ ಹಿತ ಕಾಯುವ ಅಭ್ಯರ್ಥಿ ಬೇಕೆಂದು ಜನರೇ ಕೇಳುತ್ತಿದ್ದಾರೆ. ಕಾಳು ಮೆಣಸು ಮತ್ತು ಕಾಫಿಗೆ ಬೆಲೆ ನೀಡದೆ ಕೇಂದ್ರ ಸರ್ಕಾರ ಸಂಕಷ್ಟಕ್ಕೆ ತಳ್ಳಿದೆ ಎಂದರು.

ಡಿಸಿಸಿ ಮಾಜೀ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕಾಂಗ್ರೆಸ್‍ನಲ್ಲಿ ನಾಯಕರ ಪಾಳಯವೇ ಇದೆ. ಆದರೆ ಗ್ರಾಮೀಣ ಮಟ್ಟದಲ್ಲಿ ಪ್ರಯೋಗಶೀಲತೆ ಮಾಡುವ ಕಾರ್ಯಕರ್ತರ ಕೊರತೆಯಿದೆ. ದೇಶದಲ್ಲಿ ಮತ್ತೊಮ್ಮೆ ಮೋದಿ ಎಂಬ ವಾತಾವರಣ ನಿರ್ಮಿಸಲು ಯತ್ನಿಸಲಾಗುತ್ತಿದೆ. ಜಾತ್ಯಾತೀತ ಮತಗಳು ಒಗ್ಗೂಡಲೇಬೇಕಿದೆ. ಕಳೆದ ಬಾರಿ ಮೋದಿ ಅಲೆಯಲ್ಲಿ ಪ್ರತಾಪ್ ಸಿಂಹ ಗೆದ್ದಿದ್ದರು. ನಂತರ ಯಾವ ಕೆಲಸವನ್ನೂ ಮಾಡಿಲ್ಲ. ಉದ್ಯೋಗವೂ ಸೃಷ್ಟಿಯಾಗಿಲ್ಲ. ಈ ಬಗ್ಗೆ ಬಿಜೆಪಿಗರನ್ನು ಪ್ರಶ್ನಿಸಬೇಕು ಎಂದರು.

ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ. ಯಾಕೂಬ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಕಾಂಗ್ರೆಸ್ ಮುಖಂಡರಾದ ನಟೇಶ್ ಗೌಡ, ಟಿ.ಈ. ಸುರೇಶ್, ನಂದಕುಮಾರ್, ಬಗ್ಗನ ತಮ್ಮಯ್ಯ, ಹೆಚ್.ಸಿ. ನಾಗೇಶ್, ಅಪ್ರು ರವೀಂದ್ರ, ಬಸಪ್ಪ, ಮಿಥುನ್, ಬಿ.ಬಿ. ಸತೀಶ್, ವಿ.ಎ. ಲಾರೆನ್ಸ್, ನಾಗರಾಜ್, ಶ್ಯಾಂಪ್ರಸಾದ್, ಕೆ.ಎ. ಆದಂ, ಮನು ಮೇದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.