ವೀರಾಜಪೇಟೆ, ಮಾ. 26: ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿಗೆ ಯು.ಜಿ.ಸಿಯ ಅಂಗ ಸಂಸ್ಥೆಯಾದ ರಾಷ್ಟ್ರೀಯ ಮೌಲ್ಯಾಂಕನ ಮಾನ್ಯತಾ ಪರಿಷತ್ ತಂಡದವರು (ನ್ಯಾಕ್) ಭೇಟಿ ನೀಡಿ ತಾ. 22 ಹಾಗೂ 23 ರಂದು ಎರಡು ದಿನಗಳು ಕಾಲೇಜಿನ ಬೋಧನಾ ಗುಣಮಟ್ಟ, ವಿದ್ಯಾರ್ಥಿಗಳಿಗೆ ಒದಗಿಸಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಕಾಲೇಜಿನ ವಿದ್ಯಾರ್ಥಿಗ ಳೊಂದಿಗೆ ಸಂವಾದ ನಡೆಸಿದ ನ್ಯಾಕ್ ತಂಡ ಸಂಸ್ಥೆಯಲ್ಲಿನ ಶೈಕ್ಷಣಿಕ ಗುಣಮಟ್ಟ, ಕ್ರೀಡೆ, ಸಾಂಸ್ಕøತಿಕ ಮಟ್ಟದಲ್ಲಿ ಸಾಧನೆ, ಫಲಿತಾಂಶದ ಮಟ್ಟವನ್ನು ಪರಿಶೀಲಿಸಿ ವರದಿ ದಾಖಲಿಸಿದರು. ನ್ಯಾಕ್ ತಂಡ ಕಾಲೇಜಿನ ಹಳೆ ಹಾಗೂ ಹೊಸ ವಿದ್ಯಾರ್ಥಿಗಳು, ಪೋಷಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದರು.

ನ್ಯಾಕ್ ತಂಡದ ಭೇಟಿಯ ಅಂಗವಾಗಿ ತಾ. 23 ರಂದು ಸಂಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಗುಜರಾತ್‍ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದ ಉಪ ಕುಲಪತಿ ಹಾಗೂ ನ್ಯಾಕ್ ತಂಡದ ಮುಖ್ಯಸ್ಥ ಪ್ರೊ. ಶಿರಿಸ್ ಆರ್. ಕುಲಕರ್ಣಿ ಮಾತನಾಡಿ ಕಾಲೇಜಿನ ಅಭಿವೃದ್ಧಿ ಎಂಬದು ನಿಂತ ನೀರಾಗದೆ ನಿರಂತರವಾಗಿ ಮುನ್ನಡೆಯುತ್ತಿರಬೇಕು. ಆಗ ಮಾತ್ರ ಕಾಲೇಜಿನ ಸರ್ವಾಂಗೀಣ ಪ್ರಗತಿ ಸಾಧ್ಯ.

ಎಲ್ಲ ಹಂತದಲ್ಲೂ ಕಾಲೇಜಿನ ಆಡಳಿತ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಸಂತ ಅನ್ನಮ್ಮ ಕಾಲೇಜಿನ ಕಾರ್ಯ ವೈಖರಿ, ಅಭಿವೃದ್ಧಿ, ಬೋಧನೆ, ಗ್ರಂಥಾಲಯ, ಕ್ರೀಡಾ ಕೊಠಡಿ ಹಾಗೂ ಗುಣ ಮಟ್ಟ ನ್ಯಾಕ್ ತಂಡಕ್ಕೆ ತೃಪ್ತಿಯನ್ನು ತಂದಿದೆ ಎರಡು ದಿನಗಳಲ್ಲಿ ತಂಡ ತಯಾರಿಸಿದ ಖುದ್ದು ವರದಿಯ ದಾಖಲೆಯನ್ನು ಕಾಲೇಜಿನ ಪ್ರಾಂಶುಪಾಲ ಐಸಾಕ್ ರತ್ನಾಕರ್ ಅವರಿಗೆ ಹಸ್ತಾಂತರಿಸಿದರು.

ವೇದಿಕೆಯಲ್ಲಿ ನ್ಯಾಕ್ ತಂಡದ ಕೇರಳದ ತಿರುವನಂತಪುರದ ಡಾ. ಎಸ್.ವಿ. ಸುಧೀರ್, ಡಾ. ಪ್ರತಿಭಾ ಗಾಯಕ್‍ವಾಡ್, ಮಹಾರಾಷ್ಟ್ರದ ಸತಾರದ ಧನಂಜಯರಾವ್ ಗಾಡ್ಗೀಳ್, ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ಪ್ರಧಾನ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು, ಐಕ್ಯೂಐಸಿ ಸಂಚಾಲಕಿ ತೃಪ್ತಿ ಬೋಪಣ್ಣ ಉಪಸ್ಥಿತರಿದ್ದರು. ಕಳೆದ 2007ರಲ್ಲಿ ಸಂತ ಅನ್ನಮ್ಮ ಕಾಲೇಜು ಆರಂಭಗೊಂಡು ಕಳೆದ 2018ರಲ್ಲಿ ದಶಮಾನೋತ್ಸವವನ್ನು ಆಚರಿಸಿಕೊಂಡಿತು.

ಈ ಕಾಲೇಜು ಹತ್ತು ವರ್ಷಗಳ ಅವಧಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಆರು ರ್ಯಾಂಕ್‍ಗಳನ್ನು ಪಡೆದಿದೆ.