ಮಡಿಕೇರಿ ಮಾ. 26: ಹುಲಿತಾಳ ಗ್ರಾಮದ ಡಾ. ಭೀಮರಾವ್ ಅಂಬೇಡ್ಕರ್ ಕ್ರೀಡಾ ಸಮಿತಿ ಮತ್ತು ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ವತಿಯಿಂದ ದಲಿತ ಕುಟುಂಬಗಳ ನಡುವಿನ 18ನೇ ವರ್ಷದ ಜೈಭೀಮ್ ಕಪ್ ಪಂದ್ಯಾವಳಿ ಏ. 12 ರಿಂದ 14 ರವರೆಗೆ ಮೂರ್ನಾಡಿನಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘಟನೆಯ ಅಧ್ಯಕ್ಷ ನಿತಿನ್ ಹಾಗೂ ಇತರರು, ಮೂರ್ನಾಡಿನ ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಪುರುಷರಿಗೆ ಕ್ರಿಕೆಟ್ ಮತ್ತು ಕಬಡ್ಡಿ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಗಳು ನಡೆಯಲಿರುವದಾಗಿ ತಿಳಿಸಿದರು. ಪಂದ್ಯಾವಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ - ಯುವತಿ ಯರು ಮಾತ್ರ ಭಾಗವಹಿಸ ಬಹುದಾಗಿದ್ದು, ಆಸಕ್ತ ತಂಡಗಳು ಏ. 3 ರೊಳಗಾಗಿ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಸರು ನೋಂದಣಿ ಮಾಡದ ತಂಡಗಳಿಗೆ ಪಂದ್ಯಾವಳಿ ಯಲ್ಲಿ ಭಾಗವಹಿಸಲು ಅವಕಾಶ ವಿರುವದಿಲ್ಲ ಎಂದು ಸ್ಪಷ್ಟಪಡಿಸಿದರು.

ದಲಿತ ಕುಟುಂಬಗಳ ನಡುವೆ ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸ ಲಾಗುತ್ತಿದ್ದು, ಕ್ರಿಕೆಟ್ ಪಂದ್ಯಾವಳಿ 10 ಓವರ್‍ಗಳದ್ದಾಗಿದೆ. ಕಳೆದ ಸಾಲಿನಲ್ಲಿ ಸುಮಾರು 50 ತಂಡಗಳು ಭಾಗವಹಿಸಿದ್ದು, ಈ ಬಾರಿ ಇನ್ನೂ ಹೆಚ್ಚಿನ ತಂಡಗಳನ್ನು ನಿರೀಕ್ಷಿಸಲಾಗಿದೆ. ವಿಜೇತ ತಂಡಕ್ಕೆ ನಗದು ಬಹುಮಾನದ ಜೊತೆಗೆ ಆಕರ್ಷಕ್ರ ಟ್ರೋಫಿಗಳನ್ನು ನೀಡಲಾಗುವದು ಎಂದು ನುಡಿದರು.

ಹೆಸರು ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ 9731472337 (ನಿತಿನ್), 9482272942 (ಹರೀಶ್), 9008469257 (ಪುನೀತ್) ಅವರು ಗಳನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ನಿತಿನ್, ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ಪುನೀತ್, ಗೌರವಾಧ್ಯಕ್ಷ ವಿನೋದ್, ಖಜಾಂಚಿ ನಂದಕುಮಾರ್ ಹಾಗೂ ಸದಸ್ಯ ಸೂರ್ಯ ಉಪಸ್ಥಿತರಿದ್ದರು.