ವಲಿಯುಲ್ಲಾಹಿ ಮಖಾಂ ಉರೂಸ್
ಶನಿವಾರಸಂತೆ, ಮಾ. 25: ಶತಮಾನದ ಇತಿಹಾಸವಿರುವ ಬದ್ರಿಯಾ ಜುಮಾ ಮಸೀದಿ ವತಿಯಿಂದ ಆಚರಿಸಿಕೊಂಡು ಬರುತ್ತಿರುವ ಹಝ್ರತ್ ಫಕೀರ್ ಷಾಹ್ ವಲಿಯುಲ್ಲಾಹಿ ಮಖಾಂ ಉರೂಸ್ ಜಾತ್ಯತೀತ ಮನೋಭಾವನೆಯಿಂದ ಪ್ರಸಿದ್ಧಿ ಪಡೆದಿದೆ. ಭಕ್ತ ಜನರು ಸ್ನೇಹ, ಪ್ರೀತಿ ವಿಶ್ವಾಸ ಭಾವನೆಯಿಂದ ಪಾಲ್ಗೊಳ್ಳುತ್ತಾರೆ ಎಂದು ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಹಸೈನಾರ್ ಉಸ್ತಾದ್ ಅಭಿಪ್ರಾಯಪಟ್ಟರು.
ಸಮೀಪದ ಗುಡುಗಳಲೆ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ಹಝ್ರತ್ ಫಕೀರ್ ಷಾಹ್ ವಲಿಯುಲ್ಲಾಹಿ ಮಖಾಂ ಉರೂಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಷ್ಟಕಾರ್ಪಣ್ಯ, ಸಮಸ್ಯೆಗಳು ಬಂದಾಗ ಜಾತಿ ಮತ ಭೇದ ಭಾವವಿಲ್ಲದೆ ಜನರು ಭಕ್ತಿಯಿಂದ ಪ್ರಾರ್ಥನೆ ಮಾಡಿ ಹರಕೆ ಮಾಡಿಕೊಂಡಿರುತ್ತಾರೆ. ನೆರವೇರಿದ ಬಳಿಕ ಪ್ರತಿವರ್ಷ ನಡೆಯುವ ಉರೂಸ್ ನೇರ್ಚೆ ಕಾರ್ಯಕ್ರಮಕ್ಕೆ ಬಂದು ಹರಕೆ ತೀರಿಸುತ್ತಾರೆ ಎಂದರು.
ಉರೂಸ್ ಪ್ರಯುಕ್ತ ಧರ್ಮಗುರುಗಳಿಂದ ಮೌಲಿದ್ ಪಾರಾಯಣ ನಡೆಯಿತು. ಮಸೀದಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಶೇಖಬ್ಬ ಹಾಜಿ, ಮಾಜಿ ಅಧ್ಯಕ್ಷ ಸಿ.ಎಂ. ಅಬ್ದುಲ್, ಕಾರ್ಯದರ್ಶಿ ಅಬ್ದುಲ್ ರಜಾಕ್, ಸಹಕಾರ್ಯದರ್ಶಿ ಶಾಫಿ ಷಂಶುದೀನ್, ಖಜಾಂಚಿ ಸಿ.ಎ. ಹಮೀದ್, ನಿರ್ದೇಶಕರಾದ ಎಸ್.ಎ. ಖಾದರ್, ಎಚ್.ಸಿ. ಹಸೇನ್, ಖತೀಬ್ ಝಬೈರ್ ಹೈತಮಿ, ಹಸೈನಾರ್ ಉಸ್ತಾದ್ ಕಾಜೂರ್, ರಜಾಕ್ ಫೈಝಿ, ರಹಮಾನ್ ಉಸ್ತಾದ್, ಹಸೈನಾರ್ ಫೈಝಿ, ಮುಸ್ತಾಫಾ ಉಸ್ತಾದ್, ಇಸ್ಮಾಯಿಲ್ ಪೈಝಿ, ಶಮೀರ್ ಫೈಝಿ, ಪಿ.ಎ. ಶರೀಫ್, ಹಮೀದ್ ಸೂರ್ಯ ಉಪಸ್ಥಿತರಿದ್ದರು.
ಮಸೀದಿ ವತಿಯಿಂದ ನಡೆಯುತ್ತಿರುವ 3 ಮದರಸಗಳ ಬದ್ರಿಯಾ ದಫ್ ಸಂಘದ ವಿದ್ಯಾರ್ಥಿಗಳು ದಫ್ ಪ್ರದರ್ಶನ ನೀಡಿದರು.