ಶನಿವಾರಸಂತೆ, ಮಾ. 25: ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಧಿಕಾರಿಗಳ ಕಚೇರಿ ಸೋಮವಾರಪೇಟೆ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಸಿಇಇಕೊದ ಅಧ್ಯಕ್ಷ ಡಾ. ಹರೀಶ್ ಮಾತನಾಡಿ, ನೀರಿನ ಬಗ್ಗೆ ಜಾಗೃತಿ ಮೂಡಿಸುವದು ಕೇವಲ ಘೋಷಣೆಗಳಲ್ಲಿ, ಸಲಹೆ ನೀಡುವದರಲ್ಲಿ ಮುಗಿದು ಹೋಗಬಾರದು. ಸ್ವತಃ ಅವುಗಳನ್ನು ಪಾಲಿಸಿ ಇತರರು ಅದನ್ನು ಅನುಸರಿಸುವಂತೆ ಮಾಡಬೇಕು ಎಂದರು. ಈ ಸಂದರ್ಭ ನೀರಿನ ಪುನರ್ ಬಳಕೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಶಿಕ್ಷಕ ಸತೀಶ ಸಿ.ಎಸ್. ಶಾಲಾ ಆವರಣದಲ್ಲಿ ವಿನೂತನವಾಗಿ ರೂಪಿಸಿರುವ ಸಾಂಪ್ರದಾಯಿಕ ವಿಧಾನದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಪುನಃ ಬಳಸುವ ಘಟಕವನ್ನು ವೀಕ್ಷಣೆ ಮಾಡಲಾಯಿತು. ಶಾಲೆಯಲ್ಲಿ ಉಪಯೋಗಿಸುತ್ತಿರುವ ನೀರನ್ನು ಸಾಂಪ್ರದಾಯಿಕ ವಿಧಾನದಲ್ಲಿ ಅಂದರೆ ಕಲ್ಲು, ಮರಳು, ಹುಲ್ಲು, ಇದ್ದಿಲು ಮತ್ತು ಕ್ಯಾಲ್ಸಿಯಂ ಕ್ಯಾಂಡಲ್‍ಗಳನ್ನು ಬಳಸಿ ನೀರನ್ನು ಶುದ್ಧಗೊಳಿಸಿ ಆ ನೀರನ್ನು ಶಾಲಾ ಕೈತೋಟಗಳಿಗೆ ಬಳಸುವ ವ್ಯವಸ್ಥೆಯನ್ನು ಮಾಡಲಾಗಿದ್ದು, ವಿದ್ಯಾರ್ಥಿಗಳಲ್ಲಿ ನೀರಿನ ಪುನರ್‍ಬಳಕೆ ಅರಿವನ್ನು ಮೂಡಿಸಲಾಗುತ್ತಿದೆ. ನೀರಿನ ಸದ್ಬಳಕೆಯ ಕುರಿತು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಬಿ. ವಿಜಯ್‍ಕುಮಾರ್ ಮತ್ತು ಲೋಕೇಶ್ ಅವರು ಚಿತ್ರಕಲಾ ಸ್ಪರ್ಧೆಯನ್ನು ನಡೆಸಿಕೊಟ್ಟರು. ದಿನದ ಮಹತ್ವದ ಕುರಿತು ತಮ್ಮ ತಮ್ಮ ಭಾಷಣಗಳಲ್ಲಿ ಮಾತನಾಡಿದ ವಿದ್ಯಾರ್ಥಿಗಳು ವಿವರವಾಗಿ ತಿಳಿಸಿದರು.
ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ನೀರಿದ್ದರೂ ಅವುಗಳನ್ನು ಉಳಿಸುವ ಯಾವ ಯೋಜನೆಯೂ ಜಾರಿಯಲ್ಲಿಲ್ಲದಿರುವದು ವಿಷಾದನೀಯ. ಸಮುದ್ರ ಸೇರುವ ನೀರನ್ನು ಹಿಡಿದಿಡುವ ಕಾರ್ಯ ಜರೂರಾಗಿ ಆಗಬೇಕಾಗಿದೆ. ಅಂತರ್‍ಜಲವನ್ನು ಹೆಚ್ಚಿಸುವ ಸಲುವಾಗಿ ಪಂಚಾಯಿತಿಗಳು ಮನೆ ಕಟ್ಟಲು ಪರವಾನಗಿ ನೀಡುವ ಸಂದರ್ಭದಲ್ಲಿ ಇಂಗು ಗುಂಡಿಗಳನ್ನು ತೋಡುವದನ್ನು ಕಡ್ಡಾಯ ಮಾಡಬೇಕು. ಗಿಡಗಳಿಗೆ ನೀರುಣಿಸಲು ಪೈಪಿಗೆ ಪ್ರತಿಯಾಗಿ ಕ್ಯಾನ್ ಬಳಸಬೇಕು. ನೀರನ್ನು ವ್ಯರ್ಥ ಮಾಡುವವರಿಗೆ ದಂಡ ಹಾಕುವ ಪದ್ಧತಿ ಬರಬೇಕು. ಹನಿ ನೀರಾವರಿಗೆ ಆದ್ಯತೆ ನೀಡುವ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಇಂಧನ ಉಳಿತಾಯ ಜಾಗೃತಿ ಕಾರ್ಯಕ್ರಮವನ್ನು ಸೋಮವಾರಪೇಟೆ ತಾಲೂಕಿನಲ್ಲಿ ಯಶಸ್ವಿಯಾಗಿ ಹಮ್ಮಿಕೊಂಡ ಸಿ.ಆರ್.ಪಿ.ಗಳಾದ ಸತೀಶ್ ಕೆ.ಎನ್., ಮಧುಕುಮಾರ್, ಸಂತೋಷ್ ರುಬೀನಾ ಸುರೇಶ್ ಆಶೋಕ್ ಗಿರೀಶ್ ಜವರಯ್ಯ ಬಿ.ಆರ್.ಸಿ.ಗಳಾದ ಶಶಿಧರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಮಂಜುನಾಥ್, ಶಿಕ್ಷಕರಾದ ಸತೀಶ್, ಪ್ರೇರಣಾ ಕ್ಲಬ್‍ನ ಸಂಚಾಲಕ ರಾಘವೇಂದ್ರ, ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು.