ಸೋಮವಾರಪೇಟೆ, ಮಾ. 25: ಐಗೂರು, ಕಾಜೂರು, ಯಡವನಾಡು, ಸೂಳೆಬಾವಿ, ಯಡವಾರೆ, ಸಜ್ಜಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳು ಓಡಾಡುತ್ತಿರುವ ಪರಿಣಾಮ ಗ್ರಾಮಸ್ಥರಲ್ಲಿ ಭಯ ಹುಟ್ಟಿಕೊಂಡಿದೆ.
ಈ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಜನ ಸಾಮಾನ್ಯರು ರಸ್ತೆಯಲ್ಲಿ ಸಂಚರಿಸಲೂ ಸಹ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯಡವನಾಡು ಮೀಸಲು ಅರಣ್ಯ ಒಣಗಿ ನಿಂತಿದ್ದು, ಕಾಡಾನೆಗಳಿಗೆ ಆಹಾರ ಇಲ್ಲದಂತಾಗಿದೆ. ಅರಣ್ಯದೊಳಗೆ ನೀರಿಗಾಗಿ ನಿರ್ಮಿಸಲಾಗಿದ್ದ ಕೆರೆಯೊಂದು ಕಳೆದ ಮಳೆಗಾಲದಲ್ಲಿ ಏರಿ ಒಡೆದು ಹೋಗಿರುವ ಪರಿಣಾಮ ಇದೀಗ ವನ್ಯಪ್ರಾಣಿಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಪರಿಣಾಮ ಈ ಭಾಗದಲ್ಲಿ 4 ಕಾಡಾನೆಗಳು ಜನವಸತಿ ಪ್ರದೇಶದತ್ತ ಲಗ್ಗೆಯಿಡುತ್ತಿವೆ.
ಈ ಹಿಂದೆ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದೊಳಗೆ ತೆರಳಿ ಆಹಾರ ಸೇವಿಸಿ, ಅಲ್ಲೇ ಇರುವ ಕೆರೆಯ ನೀರು ಕುಡಿದು ವಾಪಸ್ ಬರುತ್ತಿದ್ದ ಕಾಡಾನೆಗಳಿಗೆ, ಸೋಲಾರ್ ಅಳವಡಿಸುವ ಮೂಲಕ ತಡೆಯೊಡ್ಡಲಾಗಿದೆ. ಇದರೊಂದಿಗೆ ಅರಣ್ಯದಿಂದ ಹೊರ ಬರದಂತೆ ಅರಣ್ಯ ಇಲಾಖೆ ಕಂದಕ, ಸೋಲಾರ್ ಅಳವಡಿಸಿ ಬಂಧಿಸಿಡಲು ಪ್ರಯತ್ನಿಸಿದೆ. ಆದರೂ ಸಹ ಹಸಿವಿನಿಂದ ಕಂಗಾಲಾಗುವ ಕಾಡಾನೆಗಳು ಸೋಲಾರ್ ಬೇಲಿಯನ್ನು ಲೆಕ್ಕಿಸದೇ ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಈ ಕಾಡಾನೆ ಹಾವಳಿ ತಡೆಗಟ್ಟುವಂತೆ ಈ ಭಾಗದ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.