ಮಡಿಕೇರಿ, ಮಾ.25 : ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಲಯನ್ಸ್ ಸಂಸ್ಥೆಯು ಕೊಡಗಿನ ಪ್ರಾಕೃತಿಕ ವಿಕೋಪದ ದುರಂತಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದೆ ಎಂದು ತಿಳಿಸಿರುವ ಲಯನ್ಸ್ 317ಡಿ ಜಿಲ್ಲೆಯ ರಾಜ್ಯಪಾಲರಾದ ದೇವದಾಸ್ ಭಂಡಾರಿ, ಲಯನ್ಸ್ ಜಿಲ್ಲೆಯ ಎಲ್ಲಾ ಕ್ಲಬ್‍ಗಳು 20 ಕೋಟಿ ರೂ.ವೆಚ್ಚದ ವಿವಿಧ ಸೇವಾ ಕಾರ್ಯಗಳನ್ನು ನಡೆಸಿರುವದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆಯ 98 ಲಯನ್ಸ್ ಕ್ಲಬ್‍ಗಳು ಹತ್ತು ಹಲವು ಸೇವಾ ಕಾರ್ಯಗಳನ್ನು ನಡೆಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಲಯನ್ಸ್ ಜಿಲ್ಲಾ ವ್ಯಾಪ್ತಿಯಲ್ಲಿ ಸಂಸ್ಥೆ ಹೊಂದಿದ್ದ 3 ಸಾವಿರ ಆಸುಪಾಸಿನ ಸದಸ್ಯ ಬಲ ಇಂದು 4 ಸಾವಿರದ ಗಡಿಯನ್ನು ದಾಟಿರುವದಾಗಿ ಮಾಹಿತಿ ನೀಡಿದರು.
ಸಂತ್ರಸ್ತರಿಗೆ 3 ಮನೆ
ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾದ ಹಾನಿಯ ಸಂದರ್ಭ ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ಸಿದ್ದಾಪುರ ಸೇರಿದಂತೆ ವಿವಿಧ ಲಯನ್ಸ್ ಕ್ಲಬ್‍ಗಳ ಮೂಲಕ ಸೂಕ್ತ ಸ್ಪಂದನ ನೀಡಲಾಗಿದೆ, ಅಲ್ಲದೆ ಮೂರು ಮನೆಗಳನ್ನು ನಿರ್ಮಿಸಿಕೊಡುತ್ತಿದೆ. ಇದರಲ್ಲಿ ಎರಡು ಮನೆಗಳು ಪೂರ್ಣ ಗೊಂಡಿದ್ದು, ಫಲಾನುಭವಿಗಳಿಗೆ ಸುಂಟಿಕೊಪ್ಪದ ಕುಂಬಾರಗಡಿಗೆಯಲ್ಲಿ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು.
ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಘಟಿಸಿದ ಹಂತದಲ್ಲೆ ದಕ್ಷಿಣ ಕನ್ನಡ, ಹಾಸನ ವಿಭಾಗಗಳ ಕೆಲವೆಡೆಗಳಲ್ಲಿ ದುರಂತ ಸಂಭವಿಸಿದೆ. ಇದಕ್ಕೆ ಸ್ಪಂದಿಸಿದ ಲಯನ್ಸ್ ಒಟ್ಟಾಗಿ 8 ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತು ಎಂದರು.
ನೆರೆಯ ಕೇರಳ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾದ ಅನಾಹುತಗಳ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಲಯನ್ಸ್ ಫೌಂಡೇಷನ್ 24 ಕೋಟಿ ರೂ. ನೆರವನ್ನು ಒದಗಿಸಿದೆ. ಆದರೆ, ಕೊಡಗಿಗೆ ಅಂತಹ ನೆರವನ್ನು ಪಡೆಯಲು ಒಂದಷ್ಟು ತಾಂತ್ರಿಕ ತೊಡಕು ಉಂಟಾಗಿದೆ ಎಂದು ತಿಳಿಸಿದ ದೇವದಾಸ್ ಭಂಡಾರಿ, ಸುರತ್ಕಲ್‍ನಲ್ಲಿ ಲಯನ್ಸ್ ವಿಶೇಷ ಶಾಲೆಯನ್ನು ನಡೆಸುತ್ತಿದ್ದು, ಇದರ ಕಟ್ಟಡಗಳ ನಿರ್ಮಾಣಕ್ಕೆ ಅಂತರಾಷ್ಟ್ರೀಯ ಲಯನ್ಸ್ ಫೌಂಡೇಷನ್‍ನಿಂದ 1 ಲಕ್ಷ ಡಾಲರ್ ವಿಶೇಷ ಅನುದಾನ ದೊರಕಿದೆ ಎಂದು ಅವರು ಉಲ್ಲೇಖಿಸಿದರು,
ಲಯನ್ಸ್ ಜಿಲ್ಲೆÉಯ ಕ್ಲಬ್‍ಗಳನ್ನು ಸೇವಾ ಕಾರ್ಯಗಳೊಂದಿಗೆ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ವಿವಿಧ ಕ್ಲಬ್‍ಗಳು ಅಂದಾಜು 100 ಏಕರೆ ಗದ್ದೆಯಲ್ಲಿ ಭತ್ತದ ಕೃಷಿಯನ್ನು ನಡೆಸಿರುವದಲ್ಲದೆ, ವಿದ್ಯಾರ್ಥಿಗಳಲ್ಲೂ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ಶ್ರಮಿಸಿದೆ. ಇದರೊಂದಿಗೆ 100 ಶೌಚಾಲಯಗಳನ್ನು ಕ್ಲಬ್‍ಗಳ ಮೂಲಕ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪಿ.ಎಂ.ಪೆಮ್ಮಯ್ಯ ಮಾತನಾಡಿ, ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಕುಂಬಾರಗಡಿಗೆ ಗ್ರಾಮದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ವಾಸವಿದ್ದು, ಪ್ರಾಕೃತಿಕ ವಿಕೋಪ ದಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಕನ್ನಿಕಂಡ ಪಾರ್ವತಿ ಮತ್ತು ಕನ್ನಿಕಂಡ ಪೊನ್ನಪ್ಪ ಅವರುಗಳಿಗೆ ತಲಾ 4 ಲಕ್ಷ ರೂ. ವೆಚ್ಚದಲ್ಲಿ ಎರಡು ಮನೆಗಳನ್ನು ನಿರ್ಮಿಸಲಾಗಿದೆ. ಮತ್ತೊಂದು ಮನೆಯನ್ನು ಸೋಮವಾರಪೇಟೆ ಯಲ್ಲಿ ಸ್ಥಳೀಯ ಲಯನ್ಸ್ ಮೂಲಕ ನಿರ್ಮಿಸಲಾಗುತ್ತಿದೆ ಎಂದು ದೇವದಾಸ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ವಲಯಾಧ್ಯಕ್ಷ ಜೆ.ವಿ.ಕೊಠಿ, ಮಡಿಕೇರಿ ನಗರಾಧ್ಯಕ್ಷ ಕೆ.ಕೆ.ದಾಮೋದರ, ಗೋಣಿಕೊಪ್ಪಲು ಲಯನ್ಸ್ ಸಂಪರ್ಕಾಧಿಕಾರಿ ಧನು ಉತ್ತಯ್ಯ ಹಾಗೂ ಸಿದ್ದಾಪುರ ಲಯನ್ಸ್ ಕಾರ್ಯದರ್ಶಿ ವಿವೇಕ್ ಜೋಯಪ್ಪ ಉಪಸ್ಥಿತರಿದ್ದರು.