ಮಡಿಕೇರಿ, ಮಾ. 25 : ನಗರದಲ್ಲಿ ಬೀದಿ ವ್ಯಾಪಾರಿಗಳು ನಿಯಮ ಬಾಹಿರವಾಗಿ ರಸ್ತೆಯ ಅಲ್ಲಲ್ಲಿ ವ್ಯಾಪಾರಕ್ಕೆ ಮುಂದಾಗಿದ್ದನ್ನು ತಡೆಗಟ್ಟಲು ನಗರಸಭೆ ಅಧಿಕಾರಿಗಳು ಕ್ರಮ ಜರುಗಿಸಿರುವ ಬೆನ್ನಲ್ಲೇ ಈ ಮಂದಿ ಜಿಲ್ಲಾಧಿಕಾರಿಗಳ ಬಳಿ ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದ್ದಾರೆ.

ಇಂದು ಬೆಂಗಳೂರಿನಿಂದ ಆಗಮಿಸಿದ್ದ ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ಜತೆಗೂಡಿ ಸ್ಥಳೀಯರು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಆ ಬಳಿಕ ಸಭೆ ನಡೆಸಿ ನೂತನ ಒಕ್ಕೂಟ ರಚಿಸಿಕೊಂಡರು.

ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷರಾಗಿ ಎಂ.ಆರ್. ಅಯೂಬ್ ಹಾಗೂ ಕಾರ್ಯದರ್ಶಿಯಾಗಿ ಆರ್.ಅನಿಲ್ ನೇಮಕಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಉಮ್ಮರ್ ಆಲಿ, ಸಹಕಾರ್ಯದರ್ಶಿಯಾಗಿ ಮೋಹನ್ ರಾಜ್, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಜ್ಯೋತಿ, ಖಜಾಂಚಿ ಮಧು, ಸಹ ಖಜಾಂಚಿಯಾಗಿ ಸರ್ದಾರ್ ಅಹಮ್ಮದ್ ಆಯ್ಕೆಯಾಗಿದ್ದಾರೆ.

ನಗರದ ಕೂರ್ಗ್ ಕಮ್ಯೂನಿಟಿ ಹಾಲ್‍ನಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಆರ್. ಜಗದೀಶ್ ಹಾಗೂ ರಾಜ್ಯ ಸಹ ಸಂಚಾಲಕ ಎನ್. ಗುರುಸ್ವಾಮಿ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ 60ಕ್ಕೂ ಅಧಿಕ ಮಂದಿ ಸಂಘದ ಸದಸ್ಯತ್ವವನ್ನು ಪಡೆದುಕೊಂಡರು.