ಬಿಲ್ ತಡೆಹಿಡಿಯಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧಾರ
ಶ್ರೀಮಂಗಲ, ಮಾ. 25: ಹುದಿಕೇರಿ ಮತ್ತು ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಪ್ರದೇಶವನ್ನು ಸಂಪರ್ಕಿಸುವ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣ ಗೊಂಡ ತುಪ್ಪನಾಣಿ-ಬೆಳ್ಳೂರು-ಹರಿಹರ ಸಂಪರ್ಕ ರಸ್ತೆ ಕಾಮಗಾರಿ ಕಳಪೆಯಾಗಿದೆ. ಇದರ ನಿರ್ವಾಹಣೆಯನ್ನು ಮಾಡಬೇಕಾದ ಗುತ್ತಿಗೆದಾರರು ಸರಿಯಾಗಿ ಮಾಡಿಲ್ಲ. ಆದರಿಂದ ಈ ಕಾಮಗಾರಿಯ ಬಿಲ್ ಪಾವತಿಸದಂತೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಲಿಖಿತ ದೂರು ನೀಡಲಾಗುವದೆಂದು ಹರಿಹರ ಹಾಗೂ ಬೆಳ್ಳೂರು ಗ್ರಾಮಸ್ಥರು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷದ ಹಿಂದೆ ರೂ. 2.65 ಕೋಟಿ ವೆಚ್ಚದಲ್ಲಿ 5.5 ಕಿ.ಮೀ. ಅಂತರದ ರಸ್ತೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮೂರ್ನಾಡುವಿನ ಗುತ್ತಿಗೆದಾರ ಬಾಬು ಎಂಬವರು ಕಾಮಗಾರಿಯನ್ನು ಮಾಡಿದ್ದಾರೆ. 5 ವರ್ಷ ಗುತ್ತಿಗೆದಾರರೇ ಈ ರಸ್ತೆಯನ್ನು ದುರಸ್ತಿ ಉಂಟಾದಲ್ಲಿ ನಿರ್ವಹಿಸಬೇಕಾಗಿದೆ. ಆದರೆ, ಕಳೆದ ಮಳೆಗಾಲದ ನಂತರ ಈ ರಸ್ತೆ ಸಂಪೂರ್ಣ ಹಾಳಾಗಿತ್ತು. ಈ ವ್ಯಾಪ್ತಿಯ ಗ್ರಾಮಸ್ಥರು ಈ ರಸ್ತೆಯನ್ನು ಮರು ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದರು. ಇದೀಗ ನಿರ್ವಹಣೆಯನ್ನು ಗುತ್ತಿಗೆದಾರರೇ ಮಾಡಬೇಕಾಗಿದ್ದರೂ, ಈ ರಸ್ತೆ ದುರಸ್ಥಿಗೆ ಮಳೆ ಹಾನಿ ಅನುದಾನದಡಿ ಹೆಚ್ಚುವರಿಯಾಗಿ ರೂ. 30 ಲಕ್ಷ ಮಂಜೂರಾಗಿದ್ದು ಆ ಅನುದಾನ ದೊಂದಿಗೆ ಮರು ಡಾಂಬರೀಕರಣ ಮಾಡಬೇಕಾಗಿತ್ತು.
ಆದರೆ, ರಸ್ತೆಯ ಹಲವೆಡೆ ತೇಪೆ ಹಚ್ಚಿದ್ದು, ಡಾಂಬರು ಮಾಡಿರುವ ಕಾಮಗಾರಿಯು ಸಹ ಕಳಪೆಮಟ್ಟದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಲವೆಡೆ ರಸ್ತೆಯ ಎರಡು ಕಡೆ ಕಿತ್ತುಹೋಗಿದ್ದು ಅದಕ್ಕೆ ಜಲ್ಲಿಯನ್ನು ಹಾಕದೆ ಮಣ್ಣಿನ ಮೇಲೆ ಡಾಂಬರು ಹಾಕಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕಾಮಗಾರಿಗೆ ಯಾವದೇ ಬಿಲ್ಲನ್ನು ಪಾವತಿಸದೆ ಕಾಮಗಾರಿ ಯನ್ನು ಗುಣಮಟ್ಟದಲ್ಲಿ ಮಾಡುವವರೆಗೆ ತಡೆಹಿಡಿಯಬೇಕು. ಇಂತಹ ಗುತ್ತಿಗೆದಾರರಿಗೆ ಮುಂದಿನ ದಿನಗಳಲ್ಲಿ ಯಾವದೇ ಕಾಮಗಾರಿ ಗಳನ್ನು ನೀಡಬಾರದು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಜಿಲ್ಲಾಧಿಕಾರಿ ಯವರನ್ನು ಸಂಬಂಧಿಸಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಲಿಖಿತ ದೂರು ನೀಡಲಾಗುವದು. ಗ್ರಾಮಸ್ಥರ ಮನವಿಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟ ನಡೆಸಲಾಗುವದೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಈ ಸಂದರ್ಭ ಗ್ರಾಮಸ್ಥರಾದ ಕಳ್ಳೇಂಗಡ ಸಚಿನ್, ಮನೋಜ್, ಹರೀಶ್, ದಿನೇಶ್, ರಮೇಶ್, ಸುಬ್ಬಯ್ಯ, ನವೀನ್, ಬೊಳ್ಳಿಮಾಡ ಸುಬ್ರಹ್ಮಣಿ, ಸುರೇಶ್, ಬೋಪಣ್ಣ, ರಂಜಿತ್, ಜಗನ್, ರತೀಶ್, ದುಗ್ಗಡ ಲೋಕೇಶ್, ನಿಕ್ಕಿ, ಮಹೇಶ್ ಹಾಜರಿದ್ದರು.