ಮಡಿಕೇರಿ, ಮಾ. 24: ನಗರದ ಮಹದೇವಪೇಟೆಯ ಸಂತೆ ಮಾರುಕಟ್ಟೆ ಆವರಣದಲ್ಲಿರುವ ಆರು ಅಂಗಡಿಗಳಲ್ಲಿ ಸರಣಿ ಕಳ್ಳತನಕ್ಕೆ ಮುಂದಾಗಿರುವ ತಿಳಿಗೇಡಿಗಳು; ನಾಲ್ಕು ಅಂಗಡಿಗಳಲ್ಲಿ ಕೈಗೆ ಸಿಕ್ಕ ನಗದು ದೋಚಿದ್ದರೆ; ಇನ್ನೆರಡು ಮಳಿಗೆಗಳ ಬೀಗ ಮುರಿಯಲು ವಿಫಲ ಯತ್ನ ನಡೆಸಿರುವದು ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಅಂಗಡಿಗಳ ಬಾಗಿಲು ಮುಚ್ಚಿರುವ ವರ್ತಕರು ಇಂದು ಬೆಳಿಗ್ಗೆ ಎಂದಿನಂತೆ ತಮ್ಮ ತಮ್ಮ ಅಂಗಡಿಗಳಿಗೆ ಬಂದಾಗ ಅಚ್ಚರಿ ಎದುರಾಗಿದೆ. ಮಾರುಕಟ್ಟೆಯ ಗಣೇಶ ಕಲ್ಯಾಣ ಮಂಟಪ ಬಳಿಯ ಮಹಮ್ಮದ್ ಆಲಂ ಎಂಬವರ ದಿನಸಿ ಅಂಗಡಿಗೆ ನುಗ್ಗಿರುವ ಕಳ್ಳರು; ಒಳಗಡೆ ಇದ್ದ ಸಿಗರೇಟು ಸಹಿತ ಪೊನ್ನಾಣಿ ಆಶ್ರಮಕ್ಕೆ ತೆಗೆದಿರಿಸಿದ್ದ ಹುಂಡಿಯನ್ನು ಒಡೆದು ಹಾಕಿ ನಗದು ದೋಚಿದ್ದಾರೆ. (ಮೊದಲ ಪುಟದಿಂದ) ಈ ಮಳಿಗೆಯಲ್ಲೇ ಸಿಗರೇಟು ಸೇರಿ ಖಾರದಪುಡಿ ಡಬ್ಬಿಯೊಳಗೆ ಅದರ ಬೂದಿಯನ್ನು ಹಾಕಿರುವದು ಗೋಚರಿಸಿದೆ.ಅಲ್ಲದೆ, ಮಹದೇವಪೇಟೆಗೆ ಸಂಪರ್ಕ ಕಲ್ಪಿಸುವ ಮಾರುಕಟ್ಟೆ ರಸ್ತೆ ತಿರುವಿನ ಸುರೇಶ್ ಎಂಬವರ ಅಂಗಡಿ ಬೀಗ ಮುರಿದು, ಕೈಗೆ ಸಿಕ್ಕಷ್ಟು ನಗದು ದೋಚಿದ್ದಾರೆ. ಅಲ್ಲಿಯೇ ಪಕ್ಕದಲ್ಲಿರುವ ಅಹ್ಮದ್ ಎಂಬವರ ದಿನಸಿ ಅಂಗಡಿಗೆ ನುಗ್ಗಲು ವಿಫಲ ಯತ್ನ ನಡೆಸಿ; ಮತ್ತೊಂದು ಹಣ್ಣು ಅಂಗಡಿ ಬಾಗಿಲು ಮುರಿದು ನುಗ್ಗಿದ್ದಾರೆ. ಅಲ್ಲಿಂದ ಕೈಗೆ ಸಿಕ್ಕ ಚಿಲ್ಲರೆ ಹಣದೊಂದಿಗೆ ಸೇಬು ಇತ್ಯಾದಿ ಕೊಂಡೊಯ್ದಿದ್ದಾರೆ. ಮತ್ತೆ ದುಷ್ಕøತ್ಯ ಮುಂದುವರೆಸಿರುವ ಕಳ್ಳರು ಸುರೇಶ್ ಎಂಬವರ ಬೇಕರಿಯಿಂದ ಕೈಗೆ ಸಿಕ್ಕಷ್ಟು ಚಿಲ್ಲರೆ ಹಣದೊಂದಿಗೆ ನಗದು ದೋಚಿಕೊಂಡಿದ್ದಾರೆ. ಇಲ್ಲಿಂದ 2 ಲೀ. ಸಾಮಥ್ರ್ಯದ ತಂಪು ಪಾನೀಯ ಬಾಟಲಿಗಳು, ಖಾರತಿಂಡಿ ಹೊತ್ತೊಯ್ದಿದ್ದಾರೆ.ಮಾರುಕಟ್ಟೆಯಲ್ಲೇ ಬೀಡು : ಇಷ್ಟೆಲ್ಲ ಕುಚೇಷ್ಟೆಯೊಂದಿಗೆ ಧಾಷ್ಟ್ಯ ಮೆರೆದಿರುವ ಈ ತಿಳಿಗೇಡಿಗಳು, ರಾತ್ರಿಯಿಡೀ ಮಾರುಕಟ್ಟೆ ಸಂಕೀರ್ಣದ ನೂತನ ಕಟ್ಟಡದ ನೆಲ ಮಳಿಗೆಯಲ್ಲಿ ಬೀಡು ಬಿಟ್ಟಿರುವದು ಕಂಡು ಬಂದಿದೆ. ಅಲ್ಲಿ ಅಂಗಡಿಗಳಿಂದ ಕದ್ದೊಯ್ದಿದ್ದ ಹಣ್ಣು, ತಂಪು ಪಾನಿಯ, ಸಿಗರೇಟು ಇತ್ಯಾದಿಯನ್ನು ಮನಸೋ ಇಚ್ಚೆ ನುಂಗಿದ್ದಲ್ಲದೆ, ಸಿಮೆಂಟ್ ಚೀಲ ಇತ್ಯಾದಿ ಹಾಸಿಕೊಂಡು ಮಲಗಿರುವ ಸುಳಿವು ಲಭಿಸಿದೆ.

ಮುಂಜಾವಿನಲ್ಲಿ ಕಾಲಿಗೆ ಬುದ್ಧಿ ಹೇಳಿರುವ ಈ ತಿಳಿಗೇಡಿಗಳು ಬಹುಶಃ ಮಾದಕ ವಸ್ತುಗಳ ಅಮಲಿನಲ್ಲಿ ತೆರಳುವ ಮುನ್ನ, ಐದು ಮೊಬೈಲ್‍ಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಮಾತ್ರವಲ್ಲದೆ ತಿಂದು, ಕುಡಿದು ಮಿಕ್ಕಿರುವ ಒಂದು ಬಾಟಲಿಯಲ್ಲಿ ಕೋಕೋ ಕೋಲಾ, ಸಿಗರೇಟ್, ನಾಲ್ಕು ರೂ. ನಾಣ್ಯ ಇತ್ಯಾದಿಯನ್ನು ಪೊಲೀಸರಿಗೆ ಸುಳಿವಿನ ರೀತಿಯಲ್ಲಿ ಬಿಟ್ಟು ತೆರಳಿ ಅಚ್ಚರಿ ಮೂಡಿಸಿದ್ದಾರೆ.

ಈ ಬಗ್ಗೆ ನಗರ ಠಾಣೆಯಲ್ಲಿ ಸಂಪರ್ಕಿಸಿದಾಗ; ಪೊಲೀಸರು ಖುದ್ದು ಪರಿಶೀಲನೆ ನಡೆಸಿ ಮೊಬೈಲ್‍ಗಳನ್ನು ವಶಕ್ಕೆ ಪಡೆದಿದ್ದರಾದರೂ, ವರ್ತಕರು ಯಾರೊಬ್ಬರೂ ಲಿಖಿತ ದೂರು ನೀಡಿಲ್ಲವೆಂದು ತಿಳಿದು ಬಂದಿದೆ. ಬದಲಾಗಿ ಭಾನುವಾರವಾದರೂ ಮಾರುಕಟ್ಟೆ ವ್ಯಾಪ್ತಿಯ ವರ್ತಕರು ಈ ಕೃತ್ಯದಿಂದ ಆತಂಕಗೊಂಡಿರುವದು ಗೋಚರಿಸಿತು.