ಮಡಿಕೇರಿ, ಮಾ. 24: ಬಂದೂಕುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆಯ ನಿವಾಸಿ ನಿವೃತ್ತ ಸೇನಾಧಿಕಾರಿ ಕೆ.ಜಿ. ಉತ್ತಯ್ಯ ಅವರ ಮನೆಯಲ್ಲಿ ದಿನಾಂಕ 8.3.2019ರಂದು ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಮನೆಯೊಳಗಿದ್ದ ಯುಟಿಲೈಟೆಕ್ಸ್ ಫ್ರೆಂಚ್ ಮೇಕ್ನ ಎ787 ಸಂಖ್ಯೆಯ ಒಂಟಿ ನಳಿಕೆ ಕೋವಿ ಹಾಗೂ ನಂಬರ್ 1197ರ ಎಹೊಲ್ಲಿಸ್ ಅಂಡ್ ಸನ್ಸ್ ಲಂಡನ್ ಕಂಪೆನಿಯ ಜೋಡಿ ನಳಿಕೆ ಕೋವಿಯನ್ನು ಕಳವು ಮಾಡಿದ್ದರು. ಎರಡೂ ಕೋವಿಯ ಬೆಲೆ 2,50,000 ರೂ.ವೆಂದು ಉತ್ತಯ್ಯ ಅವರು ಪೊಲೀಸ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ನಗರ ಪೊಲೀಸರು ಜಿಲ್ಲಾ ಅಪರಾಧ ಪತ್ತೆದಳದ ಸಹಕಾರದೊಂದಿಗೆ ಸಿಡಿಆರ್ ವಿಭಾಗದ (ಮೊದಲ ಪುಟದಿಂದ) ಗಿರೀಶ್, ರಾಜೇಶ್ ಇವರುಗಳ ನೆರವಿನಿಂದ ಕಳವು ಕೃತ್ಯದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ವೀರಾಜಪೇಟೆ ಮಾಯಮುಡಿ ಗ್ರಾಮದ ರುದ್ರಬೀಡುವಿನ ಸುಳ್ಳಿಯಡ ದೀಪು ಕುಮಾರ್, ಹೆಗ್ಗಳ ಗ್ರಾಮದ ಅಚ್ಚಪಂಡ ಮೊಣ್ಣಪ್ಪ, ಟಿ.ಎಂ. ಸುಬೇರ್, ಮಡಿಕೇರಿ ತಾಳತ್ಮನೆಯ ಕಂಬೆಯಂಡ ಪೊನ್ನಪ್ಪ ಇವರುಗಳು ಬಂಧಿತ ಆರೋಪಿಗಳಾಗಿದ್ದು, ಮತ್ತೋರ್ವ ಆರೋಪಿ ಅಶೋಕ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಒಂಟಿ ನಳಿಕೆಯ ಬಂದೂಕನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಮತ್ತೊಂದು ಬಂದೂಕನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ.ಎಸ್ಪಿ ಸುಮನ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕ ಎನ್.ಸಿ. ನಾಗೇಗೌಡ ಅವರ ನೇತೃತ್ವದಲ್ಲಿ ಠಾಣಾಧಿಕಾರಿ ಷಣ್ಮುಗಂ, ಮುಖ್ಯಪೇದೆ ಕೆ.ಕೆ. ದಿನೇಶ್, ಸಿಬ್ಬಂದಿಗಳಾದ ನಾಗರಾಜ್ ಎಸ್. ಕಡಗಣ್ಣವರ್, ಮನೋಜ್, ಅಪರಾಧ ಪತ್ತೆದಳದ ಯೋಗೇಶ್, ನಿರಂಜನ್ ಇವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.