ಮಡಿಕೇರಿ, ಮಾ. 24: ‘‘ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ” ಎಂದು ಕರೆಯುತ್ತಾರೆ. ಭಗವದ್ಗೀತೆ ಹೇಗೆ ನಮಗೆ ವಿಶ್ವ ಜೀವನದ ರಹಸ್ಯವನ್ನು ತಿಳಿಸುತ್ತದೆಯೋ, ನಮ್ಮ ಜೀವನದ ಹಲವು ಸಮಸೆÀ್ಯಗಳಿಗೆ ಪರಿಹಾರವನ್ನು ಸೂಚಿಸುತ್ತದೋ ಹಾಗೆ ಮಂಕುತಿಮ್ಮನ ಕಗ್ಗ ಕೂಡ, ಅದರಲ್ಲಿ ಬರುವ ಸಾಲುಗಳು ಸರಳ ಕನ್ನಡದಲ್ಲಿದ್ದು ಜೀವನದ ಸಾರವನ್ನು ತಿಳಿಸುತ್ತದೆ ಎಂದು ಶಿವಮೊಗ್ಗದ ಖ್ಯಾತ ಪ್ರವಚನಕಾರರಾದ ಜಿ.ಎಸ್.ನಟೇಶ್ ಅವರು ನುಡಿದರು. ಅವರು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕೊಡಗು ಪತ್ರಿಕಾ ಭವನ ಟ್ರಸ್ಟ್, ಮತ್ತು ಭಾರತೀಯ ವಿದ್ಯಾಭವನ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆದ ‘ಮಂಕುತಿಮ್ಮನ ಕಗ್ಗ’ದ ಕುರಿತು ಪ್ರವಚನ ನೀಡಿದರು. ಡಿ.ವಿ. ಗುಂಡಪ್ಪ ಅವರ ಸಾಹಿತ್ಯ, ಪಂಡಿತರಿಗೆ ಮಾತ್ರ ತಲುಪಿದರೆ ಸಾಲದು ಪಾಮರರಿಗೂ ಅದು ತಲುಪಬೇಕು ಎನ್ನುವ ಉದ್ದೇಶದಿಂದ ಸುಲಭ ಕನ್ನಡದಲ್ಲಿ ಕಗ್ಗ ರಚಿಸಿದರು. ಕಗ್ಗದ ಮೇಲೆ ನಡೆದಂತಹ ವಿಶ್ಲೇಷಣೆ, ಉಪನ್ಯಾಸಗಳು, ಸಂವಾದಗಳು ಕನ್ನಡದ ಯಾವದೇ ಕೃತಿಯ ಬಗ್ಗೆ ಆಗಿಲ್ಲ ಎನ್ನುವದೇ ಕಗ್ಗದ ವಿಶೇಷ. ಕಗ್ಗ ಹತ್ತು ಹಲವು ಬಾರಿ ಮರು ಮುದ್ರಣಗೊಂಡಿದೆ. ಅಲ್ಲದೆ ಅದರ ತಾತ್ಪರ್ಯ ರಚನೆ ಕೂಡ ಹಲವಾರು ಸಾಹಿತಿಗಳಿಂದ ರಚಿಸಲ್ಪಟ್ಟಿದೆ ಎಂದು ಅವರು ವಿಶ್ಲೇಷಿಸಿದರು.ಮಾನವ ಜೀವನಕ್ಕೆ ಸಾಹಿತ್ಯ, ಕಾವ್ಯದ ಅವಶ್ಯಕತೆ ಬಹಳಷ್ಟು ಇದೆ. ಸಾಹಿತ್ಯ ಮತ್ತು ಕಾವ್ಯ ಒಳ್ಳೆಯ ರೀತಿ ಯಲ್ಲಿ ಹೇಗೆ ಬದುಕ ಬೇಕೆಂಬದನ್ನು ತಿಳಿಸುತ್ತದೆ. ಕಾವ್ಯದಿಂದ ಯಶಸ್ಸು, ಆರ್ಥಿಕ ಲಾಭ, ಲೋಕಜ್ಞಾನ, ಮನಸ್ಸಿಗೆ ಸಂತೋಷ ಮತ್ತು ಆತ್ಮಜ್ಞಾನಕ್ಕೆ ಅದು ದಾರಿ ತೋರಿಸುತ್ತದೆ ಎಂದರು.

(ಮೊದಲ ಪುಟದಿಂದ) ಇಂದಿನ ಯುವಜನಾಂಗ ಮೊಬೈಲ್ ಮತ್ತು ಇಂಟರ್‍ನೆಟ್‍ನಿಂದ ಕೆಲ ಸಮಯವಾದರೂ ಹೊರಬಂದು ಸಾಹಿತ್ಯದ ಅಭ್ಯಾಸ ಮಾಡಬೇಕಿದೆ. ಓದುವ ಅಭ್ಯಾಸವೇ ಮರೆತಿರುವ ಅವರಿಗೆ ಓದುವ ಮತ್ತು ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕಾರ್ಯಕ್ರಮವನ್ನು ಭಾರತೀಯ ವಿದ್ಯಾ ಭವನದ ಡಾ. ಪಾಟ್ಕರ್ ಅವರು ಉಧ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಳಗ ಪ್ರತಿ ತಿಂಗಳು ನಡೆಸುತ್ತಿರುವ ಸಾಹಿತ್ಯ ಸಂವಾದದ ಕಾರ್ಯಕ್ರಮದಂತೆ ಈ ಬಾರಿ ಡಿವಿಜಿಯವರ ಸಾಹಿತ್ಯ ರಚನೆ ಮಂಕುತಿಮ್ಮನ ಕಗ್ಗದ ಉಪನ್ಯಾಸ ಆಯೋಜಿಸಲಾಗಿದೆ. ಬಳಗದ ವತಿಯಿಂದ ಮುಂದೆ ಪ್ರತಿ ತಿಂಗಳು ಸಾಹಿತ್ಯ ಸಂವಾದ ನಡೆಯಲಿದೆ ಎಂದರು. ವೇದಿಕೆಯಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮೆನೇಜಿಂಗ್ ಟ್ರಸ್ಟಿ ಬಿ ಎನ್ ಮನುಶೆಣೈ ಉಪಸ್ಥಿರಿದ್ದರು. ರೇವತಿ ರಮೇಶ್ ಮತ್ತು ತಂಡ ನಾಡಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಸಾಹಿತಿಗಳಾದ ಬಿ.ಎ. ಷಂಶುದ್ದೀನ್, ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಶೋಭಾ ಸುಬ್ಬಯ್ಯ, ಬಳಗದ ಕೋಶಾಧಿಕಾರಿ ಡಿ. ರಾಜೇಶ್ ಪದ್ಮನಾಭ, ಭಾರತೀಯ ವಿದ್ಯಾ ಭವನದ ಬಾಲಾಜಿ ಕಶ್ಯಪ್ ಉಪಸ್ಥಿತರಿದ್ದರು. ಕೊಡಗು ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್. ಐ. ಮುನೀರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಉಪಾಧ್ಯಕ್ಷ ಎಂ.ಇ. ಮೊಹಿದ್ದೀನ್ ಪ್ರವಚನಕಾರರ ಪರಿಚಯ ಮಾಡಿದರು. ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫರ್ಡ್ ಕ್ರಾಸ್ತಾ ಸ್ವಾಗತಿಸಿ, ಆಡಳಿತ ಮಂಡಳಿ ಸದಸ್ಯರಾದ ಅಂಬೆಕಲ್ ನವೀನ್ ಕುಶಾಲಪ್ಪ ವಂದಿಸಿದರು.