ಸೋಮವಾರಪೇಟೆ,ಮಾ.24: ಬೆಂಗಳೂರಿನ ಶಾರದ ಪ್ರತಿಷ್ಠಾನ, ಶಾಂತಳ್ಳಿಯ ಪ್ರಕೃತಿ ಸಾಹಿತ್ಯ ಬಳಗ, ಕೂತಿ ಗ್ರಾಮದ ಲಕ್ಷ್ಮೀದೇವಿ ಸಂಜೀವಿನಿ ಒಕ್ಕೂಟ, ಸಬ್ಬಮ್ಮ ದೇವಿ ಸಂಜೀವಿನಿ ಒಕ್ಕೂಟಗಳ ಆಶ್ರಯದಲ್ಲಿ ಅಲ್ಲಿನ ಸೋಮೇಶ್ವರ ಸಮುದಾಯ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕವಿಗೋಷ್ಠಿ, ಗೀತಗಾಯನ, ನೃತ್ಯ ಮತ್ತು ಸಿದ್ಧಗಂಗಾ ಶ್ರೀಗಳ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾರದ ಪ್ರತಿಷ್ಠಾನದ ಸಂಚಾಲಕ ಹುಲಿವಾನ ನರಸಿಂಹ ಸ್ವಾಮಿ ಅವರು, ಮಹಿಳೆಯರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಭಾರತೀಯ ಸಂಸ್ಕøತಿ, ಪರಂಪರೆ, ಸನಾತನ ಧರ್ಮದ ಸಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಕೃತಿ ಸಾಹಿತ್ಯ ಬಳಗದ ಅಧ್ಯಕ್ಷೆ ರಾಧಿಕ ಕಾಳಪ್ಪ, ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲೂ ಹೆಚ್ಚಿನ ಮೀಸಲಾತಿ ನೀಡುವಂತಾಗಬೇಕು ಎಂದರು. ಕೂತಿ ಗ್ರಾಮದ ಸುಕನ್ಯ ಅವರು ಸಿದ್ದಗಂಗಾ ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು.
ಸಾಹಿತಿ ಹುಲಿವಾನ ನರಸಿಂಹ ಸ್ವಾಮಿ, ಮಾಜೀ ಸೈನಿಕರು ಗಳಾದ ಹೆಚ್.ಪಿ. ಪ್ರೇಮ್‍ಕುಮಾರ್, ದೇವಕಿ ಚಂದ್ರಶೇಖರ್ ಅವರುಗಳನ್ನು ಸನ್ಮಾನಿಸಲಾಯಿತು. ವೀರಾಜಪೇಟೆಯ ಸೆಂಟ್ ಆನ್ಸ್ ಶಾಲೆಯ ವಿದ್ಯಾರ್ಥಿನಿ ಸುರಕ್ಷಾ ಮತ್ತು ಸುಂಟಿಕೊಪ್ಪದ ಸುಪ್ರಿಯ ಅವರುಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಕೂತಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಪರಮೇಶ್, ಸೋಮೇಶ್ವರ ಯುವಕ ಸಂಘದ ಅಧ್ಯಕ್ಷ ದಿವಾಕರ್, ನಿವೃತ್ತ ಪ್ರಾಂಶುಪಾಲ ಶಾಸ್ತ್ರೀ, ಸಬ್ಬಮ್ಮ ದೇವಿ ಒಕ್ಕೂಟದ ಅಧ್ಯಕ್ಷೆ ಪುಷ್ಪಾವತಿ ಬಸವರಾಜ್, ಲಕ್ಷ್ಮೀದೇವಿ ಒಕ್ಕೂಟದ ಅಧ್ಯಕ್ಷೆ ಡಿ.ಕೆ. ಸುಶೀಲ, ಸುಕನ್ಯ, ದೇವರಾಜ್, ಪ್ರದೀಪ್‍ಕುಮಾರ್, ಸೌಮ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.