ವೀರಾಜಪೇಟೆ, ಮಾ.24: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆಯ ದೃಷ್ಟಿಯಿಂದ ಪಕ್ಷದ ಬೂತ್ ಮಟ್ಟದ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಚುನಾವಣೆಯ ಸಿದ್ಧತೆಯಲ್ಲಿರಬೇಕೆಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉಮೇದುವಾರ ಹಾಲಿ ಸಂಸದ ಪ್ರತಾಪ ಸಿಂಹ ತಿಳಿಸಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಆರ್ಜಿ-ಬೇಟೋಳಿ, ವೀರಾಜಪೇಟೆ ಪಟ್ಟಣ ಮತ್ತು ಕದನೂರು-ಕಾಕೋಟುಪರಂಬು ವಿಭಾಗಗಳ ಬೂತ್‍ಮಟ್ಟದ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಸಕ್ರೀಯ ಕಾರ್ಯಕರ್ತರುಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿಯವರ ಪ್ರಗತಿಪರ ಯೋಜನೆಗಳ ಬಗ್ಗೆ, ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರಕಾರಕ್ಕೂ ಕಳೆದ ಐದು ವರ್ಷ ಆಡಳಿತ ನಡೆಸಿದ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಸರಕಾರಕ್ಕೂ ಇರುವ ವ್ಯತ್ಯಾಸ, ಮೋದಿಯವರೇ ಮುಂದಿನ ಪ್ರಧಾನಿ ಯಾಕೆ ಆಗಬೇಕು ಎಂಬ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡು ವದು ಕಾರ್ಯಕರ್ತರ ಕರ್ತವ್ಯವಾಗಿದೆ ಎಂದರು.
ಶಾಸಕ ಕೆ.ಜಿ.ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಮುಂಬರುವ ಚುನಾವಣೆಯಲ್ಲಿ ಕಾರ್ಯಕರ್ತರು ಕೈಗೊಳ್ಳಬೇಕಾದ ತಂತ್ರವನ್ನು ತಿಳಿ ಹೇಳಿದರು. ವಿಧಾನ ಪರಿಷತ್‍ನ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ರಾಜ್ಯ ಸಮಿತಿ ಸದಸ್ಯರುಗಳಾದ ಪಟ್ಟಡ ರೀನಾ ಪ್ರಕಾಶ್, ಕುಮಾರ್ ಚಂದ್ರಪ್ರಭ, ಎಂ.ಪಿ.ಸುಜಾ ಕುಶಾಲಪ್ಪ, ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅರುಣ್ ಭೀಮಯ್ಯ, ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಹಾಜರಿದ್ದರು.