ಮುಖ್ಯಾಧಿಕಾರಿ ಎಚ್ಚರಿಕೆ
ಕುಶಾಲನಗರ, ಮಾ. 23: ಕುಶಾಲನಗರ ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸಲಾಗುವದು ಎಂದು ಕುಶಾಲನಗರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ.
ಬೈಚನಹಳ್ಳಿ ಬಳಿ ನೀರೆತ್ತುವ ಘಟಕ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಆದೇಶದಂತೆ ನದಿ ತಟದಲ್ಲಿ ಕೃಷಿ ಉದ್ದೇಶಕ್ಕೆ ಅನಧಿಕೃತವಾಗಿ ನದಿಯಿಂದ ನೀರೆತ್ತುವ ರೈತರಿಗೆ ಮೋಟಾರು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು. ಈಗಾಗಲೆ ಕೆಲವರು ಮೋಟಾರ್ ಸ್ಥಗಿತಗೊಳಿಸಿದ ಕಾರಣ ನದಿಯಲ್ಲಿ ನೀರಿನ ಹರಿವು ಮುಂದುವರೆದಿದೆ. ಇದರಿಂದಾಗಿ ಪಟ್ಟಣದ ನಾಗರಿಕರಿಗೆ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಮಾಡಲಾಗುವದು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮೂಲಕ ನದಿಗೆ ಅಡ್ಡಲಾಗಿ ಬಂಡ್ ನಿರ್ಮಿಸಿ ನದಿಯ ನೀರನ್ನು ಶೇಖರಿಸಲು ಕ್ರಮಕೈಗೊಳ್ಳಲಾಗುವದು ಎಂದು ಅವರು ತಿಳಿಸಿದರು.
ಈ ಸಂದರ್ಭ ನಗರ ನೀರು ಸರಬರಾಜು ಮಂಡಳಿ ಅಭಿಯಂತರ ಆನಂದ್ ಇದ್ದರು.