ಸೋಮವಾರಪೇಟೆ, ಮಾ. 23: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಪಣದೊಂದಿಗೆ ತಾ. 26ರಂದು ಸೋಮವಾರಪೇಟೆಯ ಕೊಡವ ಸಮಾಜದಲ್ಲಿ ಬೆಳಿಗ್ಗೆ 11 ಗಂಟೆಗೆ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಬೂತ್, ವಲಯ ಅಧ್ಯಕ್ಷರುಗಳು, ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರನ್ನು ಒಳಗೊಂಡಂತೆ ಸಭೆ ಆಯೋಜಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ಮುಖಂಡ ಬಿ.ಎ. ಜೀವಿಜಯ, ಜಿಲ್ಲಾಧ್ಯಕ್ಷ ಗಣೇಶ್, ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಅವರುಗಳೊಂದಿಗೆ ಚುನಾವಣೆ ಎದುರಿಸುವ ಸಂಬಂಧ ಮಾತುಕತೆ ನಡೆಸಲಾಗಿದೆ. ತಾ. 26ರಂದು ಕಾಂಗ್ರೆಸ್ ಸಭೆ, ನಂತರದ ದಿನಗಳಲ್ಲಿ ಜೆಡಿಎಸ್ ಪಕ್ಷದಿಂದಲೂ ಸಭೆ ನಡೆಯಲಿದೆ. ಇದಾದ ನಂತರ ಎರಡೂ ಪಕ್ಷಗಳ ಕಾರ್ಯಕರ್ತರ ಸಮಾವೇಶವನ್ನು ಜಂಟಿಯಾಗಿ ಆಯೋಜಿಸಲಾಗುವದು ಎಂದು ಮಾಹಿತಿ ನೀಡಿದರು.
ಜೀವಿಜಯ ಅವರಿಗೆ ಕಾಂಗ್ರೆಸ್ ಆಹ್ವಾನ : ಮೈತ್ರಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಜೀವಿಜಯ ಅವರೊಂದಿಗೆ ಮಾತುಕತೆ ನಡೆಸುವಂತೆ ಈಗಾಗಲೇ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ವರಿಷ್ಠರಿಂದ ಸೂಚನೆ ಬಂದಿದೆ ಎಂದ ಕೆ.ಎಂ. ಲೋಕೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನದ ಗೊಂದಲ ಏರ್ಪಟ್ಟ ಸಂದರ್ಭವೇ ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದೆವು ಎಂದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿ.ಎ. ಲಾರೆನ್ಸ್, ವಕ್ತಾರ ಬಿ.ಬಿ. ಸತೀಶ್, ಮುಖಂಡರಾದ ನಂದಕುಮಾರ್, ಪ.ಪಂ. ಸದಸ್ಯ ಉದಯಶಂಕರ್ ಅವರುಗಳು ಉಪಸ್ಥಿತರಿದ್ದರು.