ಸೋಮವಾರಪೇಟೆ, ಮಾ. 23: ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ಹಕ್ಕುಗಳನ್ನು ಮಾನ್ಯ ಮಾಡುವದು, ಅಕ್ರಮ ಸಕ್ರಮ ಸಮಿತಿ ರಚನೆ ಸೇರಿದಂತೆ ಇತರ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳು ತಕ್ಷಣ ಬಗೆಹರಿಸಬೇಕೆಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ವೇದಿಕೆಯ ಜಿಲ್ಲಾ ಸಂಚಾಲಕ ಸುನಂದ್‍ಕುಮಾರ್ ಅವರು, ಕಂದಾಯ ಭೂಮಿ ಅಕ್ರಮ ಸಕ್ರಮಕ್ಕಾಗಿ ನಮೂನೆ 57ರ ಅರ್ಜಿಗಳನ್ನು ಸ್ವೀಕರಿಸುವ ದಿನಾಂಕವನ್ನು ವಿಸ್ತರಣೆ ಮಾಡಬೇಕು. ಕಡುಬಡವರು, ಸಣ್ಣ ಮತ್ತು ಅತೀ ಸಣ್ಣ ರೈತರುಗಳು ಆಕ್ರಮಿಸಿಕೊಂಡು ವಾಸವಿರುವ ಊರುಗುಪ್ಪೆ, ಊರುಡುವೆ ಜಾಗಗಳಿಗೆ ಒಂದು ಬಾರಿ ಮಂಜೂರಾತಿ ಒದಗಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇದರೊಂದಿಗೆ ಅಕ್ರಮ ಸಕ್ರಮ ಸಮಿತಿಗಳನ್ನು ಕೂಡಲೇ ರಚಿಸಿ ಅರ್ಜಿಗಳ ವಿಲೇವಾರಿ ಮಾಡಬೇಕು. ಈಗಾಗಲೇ ಟಿ.ಟಿ. ಕಟ್ಟಿರುವವರಿಗೆ ಸಾಗುವಳಿ ಚೀಟಿ ನೀಡಿ ಆರ್‍ಟಿಸಿ ಒದಗಿಸಬೇಕು. ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ತಡೆಯೊಡ್ಡಬೇಕು ಎಂದು ಸುನಂದ್‍ಕುಮಾರ್ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸಂಭವಿಸಿದ ಅತೀವೃಷ್ಟಿಯಿಂದ ಹಾನಿಗೀಡಾದ ಕುಟುಂಬಗಳಿಗೆ ಪರಿಹಾರ ಒದಗಿಸುವ ಕಾರ್ಯವನ್ನು ಚುರುಕುಗೊಳಿಸಬೇಕು. ಹೊಸ ಮನೆಗಳ ನಿರ್ಮಾಣ ಕಾರ್ಯ ತ್ವರಿತಗೊಳಿಸಬೇಕು. ಜಿಲ್ಲೆಯ ಆದಿವಾಸಿಗಳ ಮನೆ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಇನ್ನಷ್ಟು ಅಪಾಯ ಸಂಭವಿಸುವ ಹಿನ್ನೆಲೆ ಜಿಲ್ಲಾಡಳಿತ ತಕ್ಷಣ ಹೊಸ ಮನೆಗಳನ್ನು ನಿರ್ಮಿಸಿಕೊಡಬೇಕು. ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ನಿರುದ್ಯೋಗಿ ಯುವಕ-ಯುವತಿಯರಿಗೆ ಅವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಕೆ. ಪುಟ್ಟಸ್ವಾಮಿ ಮಾತನಾಡಿ, ಅರಣ್ಯ ಕಾಯಿದೆ ಅನ್ವಯ ಬುಡಕಟ್ಟು ಆದಿವಾಸಿಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಬೇಕು.

ಸಮುದಾಯ ಅರಣ್ಯ ಸಂಪನ್ಮೂಲ ಹಕ್ಕುಗಳನ್ನು ಕೂಡಲೇ ವಿತರಿಸಬೇಕು. ಅರಣ್ಯ ಹಕ್ಕು ಕಾಯ್ದೆ ಅಡಿ ಬಾಕಿ ಉಳಿದಿರುವ ಸರ್ವೆ ಕಾರ್ಯವನ್ನು ಪ್ರಾರಂಭಿಸುವ ಮೂಲಕ ಹಕ್ಕುಪತ್ರ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ಕಾಯ್ದೆಯಡಿ ತಿರಸ್ಕøತಗೊಂಡ ಅರ್ಜಿಗಳ ಮರು ಪರಿಶೀಲನೆಗಾಗಿ ಮೇಲ್ಮನವಿ ಸಲ್ಲಿಸಬೇಕು. ಶ್ರೀಮಂತರು ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿಯನ್ನು ತೆರವುಗೊಳಿಸಬೇಕು. ಸಕ್ರಮೀಕರಣಕ್ಕೆ ಬಾಕಿ ಇರುವ 11,155 ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು, ತಕ್ಷಣ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಪುಟ್ಟಸ್ವಾಮಿ ಮನವಿ ಮಾಡಿದರು. ಗೋಷ್ಠಿಯಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ರಾಜಪ್ಪ, ಹೊಸಗುತ್ತಿ ಘಟಕದ ಅಧ್ಯಕ್ಷ ಮುತ್ತಪ್ಪ, ಗೋಣಿಮರೂರು ಹಾಡಿ ನಿವಾಸಿ ರಾಜು ಅವರುಗಳು ಉಪಸ್ಥಿತರಿದ್ದರು.