ವೀರಾಜಪೇಟೆ, ಮಾ. 23: ವೀರಾಜಪೇಟೆ ಮೀನುಪೇಟೆಯಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ (ಕೋಲ) ತೆರೆ ಮಹೋತ್ಸವವು ಮೂರು ದಿನಗಳಕಾಲ ನಡೆಯಿತು.

ತಾ. 19 ರಂದು ಗಣಪತಿ ಹೋಮ ಹಾಗೂ ದ್ವಜಾರೋಹಣದೊಂದಿಗೆ ಆರಂಭಗೊಂಡ ತೆರೆ ಮಹೋತ್ಸವ ಮುತ್ತಪ್ಪ ವೆಳ್ಳಾಟಂ, ವೇದಿಕೆ ಉದ್ಘಾಟನೆ ಬಳಿಕ ಸಂಜೆ ಕಣ್ಣೂರ್ ಮೆಲೋಡಿಸ್ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ತಾ. 20 ರಂದು ಮೊದಕಲಶ ವಿಶೇಷ ತಾಲಪೊಲಿ ಪಟ್ಟಣದ ಸುಂಕದಕಟ್ಟೆಯಿಂದ ಮಯೂರ ನೃತ್ಯ ಹಾಗೂ ಸಿಂಗಾರಿ ಮೇಳದೊಂದಿಗೆ ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಟಿ ಚೌಕಿಗಾಗಿ ಮುಖ್ಯ ರಸ್ತೆಯಲ್ಲಿ ಗಡಿಯಾರ ಕಂಬದ ಮಾರ್ಗವಾಗಿ ಮೀನುಪೇಟೆ ಶ್ರೀ ಮುತ್ತಪ್ಪ ದೇವಾಲಯದ ವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು.

ಬಳಿಕ ರಾತ್ರಿ ಶ್ರೀ ಮತ್ತಪ್ಪ ವೆಳ್ಳಾಟಂ, ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೋದಿ, ವಿಷ್ಣುಮೂರ್ತಿ ವೆಳ್ಳಾಟಂ ನಂತರ ಅನ್ನಸಂತರ್ಪಣೆ , ಮದ್ಯರಾತ್ರಿ ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ತಾ.21 ರಂದು ಬೆಳಿಗ್ಗೆ ಶಾಸ್ತಪನ್ ಹಾಗೂ ಗುಳಿಗನ ಕೋಲ, ತಿರುವಪ್ಪ ಭಗವತಿ (ಪೋದಿ) ಮತ್ತು ವಸೂರಿಮಾಲ ತೆರೆ, ವಿಷ್ಣುಮೂರ್ತಿ ಕೋಲದೊಂದಿಗೆ ತೆರೆ ಮಹೋತ್ಸವ ಮುಕ್ತಾಯಗೊಂಡಿತು. ಈ ಸಂದರ್ಭ ದೇವಾಲಯದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು. ತೆರೆ ಮಹೋತ್ಸವದಲ್ಲಿ ನೆಹರೂ ನಗರ, ಪಂಜರುಪೇಟೆ, ಕಲ್ಲುಬಾಣೆಯಿಂದ ಚಂಡೆ ಮದ್ದಳೆಯೊಂದಿಗೆ ಮುತ್ತಪ್ಪ ದೇವಸ್ಥಾನದವರೆಗೆ ಮುಖ್ಯ ರಸ್ತೆಯಲ್ಲಿ ಕಲಶ ಮೆರವಣಿಗೆ ನಡೆಯಿತು.