ನಾಪೋಕ್ಲು, ಮಾ. 23: ಗ್ರಾಮದಲ್ಲಿ ಜಾನುವಾರುಗಳು ಉತ್ತಮ ರೀತಿಯಲ್ಲಿದ್ದರೆ ಆ ಗ್ರಾಮ ಕೃಷಿ ಮತ್ತು ಆರೋಗ್ಯವಾಗಿ ಸಮೃದ್ಧಿ ಹೊಂದಲು ಸಾಧ್ಯ ಎಂದು ನಿವೃತ್ತ ಹೈಕೋರ್ಟ್ ವಕೀಲ ಪೊಕ್ಕುಳಂಡ್ರ ಅಪ್ಪಾಜಿ ಹೇಳಿದರು.
ನರಿಯಂದಡ ಅಯ್ಯಪ್ಪ ಯುವಕ ಸಂಘದ ಆವರಣದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೆರಿ ತಾಲೂಕು ಪಂಚಾಯಿತಿ, ನರಿಯಂದಡ ಗ್ರಾಮ ಪಂಚಾಯಿತಿ ಮತ್ತು ಕೊಡಗು ಜಿಲ್ಲಾ ಪಶುಪಾಲನಾ ಇಲಾಖೆ ಹಾಗೂ ನಂದಿನಿ ಮತ್ತು ಚಾಂದಿನಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ನರಿಯಂದಡ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮದ ಮಿಶ್ರತಳಿ ರಾಸುಗಳ ಪ್ರದರ್ಶನ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಿಂದ ಪಶುಪಾಲನೆಗೆ ಒತ್ತು ನೀಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುತ್ತಿದ್ದು ಇದೀಗ ಯುವಜನತೆ ಪಶು ಸಂಗೋಪನೆಯನ್ನು ಇಲಾಖೆಯ ಮೂಲಕ ವೈಜ್ಞಾನಿಕ ರೀತಿಯಲ್ಲಿ ಮಾಡುವಂತಾಗಬೇಕು ಎಂದರು.
ಗ್ರಾಮಸ್ಥರಾದ ಪೊಕ್ಕುಳಂಡ್ರ ಧನೋಜ್ ಮಾತನಾಡಿ, ನಮ್ಮ ಗ್ರಾಮ ವ್ಯಾಪ್ತಿಯಲ್ಲಿ ಪಶುವೈದ್ಯರ ಮತ್ತು ಸಿಬ್ಬಂದಿಗಳ ಕೊರತೆಯಿದ್ದು, ಕೂಡಲೇ ಪಶು ವೈದ್ಯರ ನೇಮಕ ಮಾಡಲು ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ. ಪಿ.ಸಿ. ಬೊಳ್ಕ ಮತ್ತು ಡಾ. ಚೇತನ್ ಇವರು ಇಲಾಖೆಯಲ್ಲಿ ದೊರಕುವ ಸೌಲಭ್ಯ ಹಾಗೂ ಪಶುಗಳ ಆರೈಕೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ರಾಸುಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ತೋಟಂಬೈಲು ಅನಂತಕುಮಾರ್, ಚಂಡೀರ ವಿಜಯಕುಮಾರ್, ಚೇತನ್, ಪೊಕ್ಕುಳಂಡ್ರ ಧನೋಜ್ ಹಾಗೂ ಕರುಗಳ ವಿಭಾಗದಲ್ಲಿ ಪಿ.ಯಂ. ನಾಣಯ್ಯ ಮತ್ತು ಮಾಹಿನೆ ಇವರು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ ಔಷಧಿ ಹಾಗೂ ಲಸಿಕೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಳಿಯಂಡ್ರ ಕೃಷ್ಣಪ್ಪ ವಹಿಸಿದ್ದು ಬಹುಮಾನಗಳನ್ನು ವಿತರಿಸಿದರು. ತೋಟಂಬೈಲು ಪ್ರಿಯಾ ಪ್ರಾರ್ಥಿಸಿ, ತೋಟಂಬೈಲು ಅನಂತಕುಮಾರ್ ಸ್ವಾಗತಿಸಿದರು. ಟಿ.ಎ. ಸುನಿಲ್ ನಿರೂಪಿಸಿ, ವಂದಿಸಿದರು. ಚಿಟ್ಟಿಯಪ್ಪ, ಕೃಷ್ಣವೇಣಿ ಇನ್ನಿತರರು ಉಪಸ್ಥಿತರಿದ್ದರು.