ಮಡಿಕೇರಿ, ಮಾ. 23: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ; ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಗಾಳಿಬೀಡು ವ್ಯಾಪ್ತಿಯ ಕುಂಡಾಮೇಸ್ತ್ರಿ ಜಲಸಂಗ್ರಹಗಾರದಲ್ಲಿ ಖಾಯಂ ತಡೆಗಟ್ಟೆಯೊಂದಿಗೆ, ಆಧುನಿಕ ತಂತ್ರಜ್ಞಾನದಿಂದ ಕೂಡಿದ ಸ್ವಯಂಚಾಲಿತ ದ್ವಾರಗಳನ್ನು ನಿರ್ಮಿಸಲು ತಯಾರಿ ನಡೆದಿದೆ. ಇದುವರೆಗೆ ಅಲ್ಲಿ ಮರಳು ಚೀಲಗಳನ್ನು ಇರಿಸಿ ನೀರು ಸಂಗ್ರಹಿಸಲು ಅವಕಾಶವಿದ್ದುದ್ದನ್ನು ಸ್ಮರಿಸಬಹುದು.

ನಿನ್ನೆ ಕುಂಡಾಮೇಸ್ತ್ರಿಗೆ ಖುದ್ದು ಭೇಟಿ ನೀಡಿದ್ದ ಮಂಡಳಿಯ ವಿಭಾಗೀಯ ಮುಖ್ಯ ಅಭಿಯಂತರ ಜಯರಾಮ್, ಕಾರ್ಯಪಾಲಕ ಅಭಿಯಂತರ ಸುಬ್ರಮಣಿ ಅವರುಗಳು ಸಂಬಂಧಿಸಿದ ಗುತ್ತಿಗೆದಾರರು ಮತ್ತು ಯೋಜನೆಯ ಇತರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈ ತಡೆಗಟ್ಟೆ (ಚೆಕ್ ಡ್ಯಾಂ) ಕಾಮಗಾರಿಯನ್ನು ಮಳೆಗಾಲ ಆರಂಭವಾಗುವ ಮುನ್ನ ಪೂರ್ಣಗೊಳಿಸುವಂತೆ ಸೂಚಿಸಿದರು.

ಈಗಾಗಲೇ ಜಾರಿಗೊಳಿಸಿರುವ ಯೋಜನೆಯ ಹಂತ ಹಂತದ ಕಾಮಗಾರಿಗಳನ್ನು ಒಂದು ವಾರದೊಳಗೆ ಕೈಗೊಂಡು, ತ್ವರಿತಗತಿಯಲ್ಲಿ ಕೆಲಸವನ್ನು ಪೂರೈಸಲು ಆದೇಶಿಸಿದ ಅಧಿಕಾರಿಗಳು, ರೂ. 5 ಕೋಟಿ ವೆಚ್ಚದ ಚೆಕ್‍ಡ್ಯಾಂಗೆ ನೈಸರ್ಗಿಕ ಗುರುತ್ವಾಕರ್ಷಣೆ ಮೂಲಕ ಸ್ವಯಂ ಚಾಲಿತ ಬಾಗಿಲುಗಳನ್ನು ರೂಪಿಸಲು ನಿರ್ದೇಶಿಸಿದರು.ಗುತ್ತಿಗೆದಾರರಿಗೆ ಗಡುವು : ಕುಂಡಾಮೇಸ್ತ್ರಿ ಯೋಜನೆಯ ಪ್ರಾರಂಭಿಕ ಒಪ್ಪಂದದಂತೆ, ಶಾಶ್ವತ ಚೆಕ್‍ಡ್ಯಾಂ ಅನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವದಲ್ಲದೆ, ಈ ನೀರು ಸಂಗ್ರಹಗಾರದ ತಡೆಗಟ್ಟೆಯ 4 ಮೀಟರ್ ಎತ್ತರದೊಂದಿಗೆ 36 ಮೀಟರ್ ಅಗಲದಿಂದ ಸುಸಜ್ಜಿತ ದ್ವಾರಗಳೊಂದಿಗೆ ಗುಣಮಟ್ಟದ ಕೆಲಸ ಕೈಗೊಳ್ಳಬೇಕೆಂದು ಕಿವಿಮಾತು ಹೇಳಿದರು.

ಜನತೆಯ ಸಹಕಾರಕ್ಕೆ ಸಲಹೆ : ಇಂತಹ ಮಹತ್ತರ ಯೋಜನೆಗಾಗಿ ಮಡಿಕೇರಿ ನಗರಸಭೆ ಹಾಗೂ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಜನತೆಯು ಮಂಡಳಿಯೊಂದಿಗೆ ಸಹಕರಿಸುವಂತೆ ಸಲಹೆ ನೀಡಿದ ಜಯರಾಮ್, ಗುತ್ತಿಗೆದಾರರು ಮತ್ತು ಸಂಬಂಧಿಸಿದ ಸ್ಥಳೀಯ ಅಭಿಯಂತರರು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗಾವಹಿಸುವಂತೆ ಸ್ಪಷ್ಟ ಸೂಚನೆ ನೀಡಿದರು. ಅಲ್ಲದೆ ಗಾಳಿಬೀಡು ವ್ಯಾಪ್ತಿಯಲ್ಲಿ ನೀರು ಪೂರೈಕೆಗೆ ದೊಡ್ಡ ದೊಡ್ಡ ಪೈಪ್‍ಗಳನ್ನು ಜೋಡಿಸುವಾಗ, ಅಲ್ಲಲ್ಲಿ ಹಾಳಾಗಿರುವ ರಸ್ತೆಗಳು ಮತ್ತು ಗುಂಡಿಗಳನ್ನು ಮಳೆಗಾಲಕ್ಕೆ ಮುನ್ನ ಸರಿಪಡಿಸಬೇಕೆಂದು ಆದೇಶಿಸಿದರು.

ಅಧಿಕಾರಿ ಸ್ಪಷ್ಟನೆ : ಮಡಿಕೇರಿಯಲ್ಲಿ ಕುಂಡಾಮೇಸ್ತ್ರಿ ಯೋಜನೆಯ ಉಸ್ತುವಾರಿ ಹೊಂದಿರುವ ಅಭಿಯಂತರ ಪ್ರಸನ್ನ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ, ಕುಂಡಾಮೇಸ್ತ್ರಿ ಯೋಜನೆ ಅನುಷ್ಠಾನಕ್ಕಾಗಿ ಹಂತ ಹಂತದಲ್ಲಿ ಕೆಲಸ ನಡೆದಿದ್ದು, ರೂ. 30 ಕೋಟಿ ವೆಚ್ಚದಲ್ಲಿ ಇದುವರೆಗಿನ ಎಲ್ಲಾ ಕಾಮಗಾರಿ ಮುಂದುವರಿದಿದೆ ಎಂದು ನೆನಪಿಸಿದರು. ಇದುವರೆಗೆ ಈ ಮೊತ್ತದಲ್ಲಿ ಕುಂಡಾಮೇಸ್ತ್ರಿಯಲ್ಲಿ ಮೂಲ ನೀರು ಸಂಗ್ರಹಗಾರ, ಮೋಟಾರು ಯಂತ್ರಗಳ ಅಳವಡಿಕೆ, ಕೂಟುಹೊಳೆ ಹಾಗೂ ಸ್ಟೋನ್‍ಹಿಲ್‍ನಲ್ಲಿ ರೂಪಿಸಿರುವ ಶಾಶ್ವತ ಟ್ಯಾಂಕ್‍ಗಳು, ಶುದ್ಧೀಕರಣ ಘಟಕ, ಇನ್ನಿತರ ಎಲ್ಲ ಕಾಮಗಾರಿಯೂ ಇದೇ ಮೊತ್ತದಲ್ಲಿ ಮುಂದುವರಿದಿದ್ದು, ಪ್ರಸಕ್ತ ಚೆಕ್‍ಡ್ಯಾಂ ಕೂಡ ಮುಂದುವರಿದ ಕಾಮಗಾರಿಯೆಂದು ಸ್ಪಷ್ಟಪಡಿಸಿದರು. ಕಳೆದ ನಾಲ್ಕೈದು ವರ್ಷಗಳಿಂದ ಮಡಿಕೇರಿಯ ಜನತೆಗೆ ಈ ಯೋಜನೆಯ ನೀರು ಸರಬರಾಜು ನಡೆಯುತ್ತಿದ್ದು, ನಗರಸಭೆಯಿಂದ ಇದುವರೆಗೆ ಯಾವದೇ ನಿರ್ವಹಣಾ ವೆಚ್ಚ ಕೂಡ ಭರಿಸದೆ ನೀರನ್ನು ಬಳಸಿಕೊಳ್ಳುತ್ತಿರುವದಾಗಿ ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭ ಯೋಜನೆಯ ಇಲ್ಲಿನ ಅಧಿಕಾರಿ ಪ್ರಸನ್ನ, ನಗರಸಭೆ ಆಯುಕ್ತ ಕೆ.ಎಲ್. ರಮೇಶ್, ಸಹಾಯಕ ಅಭಿಯಂತರರಾದ ನಾಗರಾಜ್, ಜೀವನ್ ಮತ್ತಿತರ ಅಧಿಕಾರಿಗಳಿದ್ದು, ಕುಂಡಾಮೇಸ್ತ್ರಿ ಯೋಜನೆ ಬಗ್ಗೆ ವಿವರಿಸಿದರು.