ಮಡಿಕೇರಿ, ಮಾ. 23: ದಕ್ಷಿಣ ಕೊಡಗಿನ ಕುಟ್ಟ ಸುತ್ತಮುತ್ತ ಹಾಗೂ ತಲಕಾವೇರಿ ವ್ಯಾಪ್ತಿಯಲ್ಲಿ ನಕ್ಸಲರ ವಿರುದ್ಧ ಈಚೆಗೆ ಕೋಂಬಿಂಗ್ ನಡೆಸಿರುವ ಬೆನ್ನಲ್ಲೇ ಇದೀಗ ಪುಷ್ಪಗಿರಿ ಹಾಗೂ ಸುಬ್ರಹ್ಮಣ್ಯ ಘಟ್ಟ ಪ್ರದೇಶಗಳಲ್ಲಿ ಮತ್ತೆ ಕಾರ್ಯಾಚರಣೆ ಮುಂದುವರಿದಿದೆ. ನಕ್ಸಲ್ ನಿಗ್ರಹ ಪಡೆಯ 3 ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವದು ದೃಢಪಟ್ಟಿದೆ.ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಗಡಿ ಗ್ರಾಮಗಳು ಮತ್ತು ಕೊಡಗಿನ ಗಡಿ ಅರಣ್ಯಗಳಲ್ಲಿ ಈ ಹಿಂದೆ ನಕ್ಸಲರ ಹೆಜ್ಜೆ ಕಾಣಿಸಿಕೊಂಡಿದ್ದ ಪ್ರದೇಶಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರಮುಖವಾಗಿ ಸಂಪಾಜೆ ಸುತ್ತಮುತ್ತಲಿನ ಅರೆಕಲ್ಲು, ಕೂಜಿಮಲೆ, ಕೊಲ್ಲಮೊಗರು ಮತ್ತು ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕಾಲೂರು ಬೆಟ್ಟ ಸಾಲಿನ ಮಾಂದಲಪಟ್ಟಿ, ಕಲ್ಮಕಾರು, ಕಡಮಕಲ್ಲು ಮುಂತಾದೆಡೆಗಳಲ್ಲಿ ಕೋಂಬಿಂಗ್ ನಡೆಸಲಾಗಿದೆ.ಅಲ್ಲದೆ ಬಿಸಿಲೆ ಬೆಟ್ಟ ಶ್ರೇಣಿಯನ್ನು ಸುತ್ತುವರಿದು ಶೋಧ ಕೈಗೊಂಡಿರುವ ಕಾರ್ಯಪಡೆ ಬಾಳುಗೋಡು ವ್ಯಾಪ್ತಿಯ ಅರಣ್ಯದೊಳಗೆ ಇಂಚಿಂಚು ಪ್ರದೇಶಗಳಲ್ಲಿ ಶೋಧ ನಡೆಸುತ್ತಿದೆ. ಪ್ರಸಕ್ತ ಎದುರಾಗಿರುವ ಲೋಕಸಭಾ ಚುನಾವಣೆ ಸಂದರ್ಭ ಸೂಕ್ಷ್ಮ ಮತಗಟ್ಟೆ ಪ್ರದೇಶಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಕಾರ್ಯಪಡೆ ಅಧಿಕಾರಿಗಳ ತಂಡದಲ್ಲಿರುವ ವಿಶ್ವಾಸನೀಯ ಮೂಲಗಳು ಖಚಿತಪಡಿಸಿವೆ.