ಮಡಿಕೇರಿ, ಮಾ. 23: ಮಡಿಕೇರಿ ನಗರದ ಹೆದ್ದಾರಿ ಬದಿಯ ಎಲ್ಲೆಂದರಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೆ ಇಂದು ಬೆಳ್ಳಂಬೆಳಿಗ್ಗೆ ನಗರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ನಗರದ ಜ. ತಿಮ್ಮಯ್ಯ ವೃತ್ತದ ಆಸುಪಾಸಿನಲ್ಲಿ ಬಟ್ಟೆ, ತರಕಾರಿ, ಹಣ್ಣು, ಎಳನೀರು, ತಿಂಡಿ ವ್ಯಾಪಾರ ಇತ್ಯಾದಿಯನ್ನು ನಗರಸಭೆ ಅನುಮತಿಯಿಲ್ಲದೆ ನಡೆಸುತ್ತಿದ್ದ ಬಗ್ಗೆ ಸಾರ್ವಜನಿಕ ದೂರುಗಳ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು.

ಹಳೆಯ ಆರ್‍ಟಿಓ ಮುಂಭಾಗ, ಜಿಲ್ಲಾ ಆಸ್ಪತ್ರೆ ಎದುರು ಹಾಗೂ ಜ. ತಿಮ್ಮಯ್ಯ ವೃತ್ತದಿಂದ ಖಾಸಗಿ ಬಸ್ ನಿಲ್ದಾಣ ತನಕ ಕಾರ್ಯಾಚರಣೆ ಯೊಂದಿಗೆ ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದವರನ್ನು ತೆರವುಗೊಳಿಸಲಾಗಿದೆ. ಇಂದು ಸಾಂಕೇತಿಕವಾಗಿ ಕಾರ್ಯಾಚರಣೆಯೊಂದಿಗೆ, ನಾಳೆಯು ಇಂತಹ ನಿಯಮ ಬಾಹಿರ ವ್ಯಾಪಾರಕ್ಕೆ ಅಂಕುಶ ಹಾಕಲಾಗುವದು ಎಂದು ನಗರಸಭೆ ಆಯುಕ್ತ ಕೆ.ಎಲ್. ರಮೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಇಂತಹ ವ್ಯಾಪಾರಿಗಳಿಂದ ಪಾದಚಾರಿಗಳು ಮತ್ತು ವಾಹನಗಳ ಸಂಚಾರ; ನಿಲುಗಡೆಗೂ ಸಮಸ್ಯೆ ಬಗ್ಗೆ ಸಾರ್ವಜನಿಕ ದೂರುಗಳ ಹಿನ್ನೆಲೆ ಕ್ರಮ ಕೈಗೊಂಡಿರುವದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಗ್ಯ ನಿರೀಕ್ಷಕರಾದ ನಾಚಪ್ಪ, ಪರಿಸರ ಅಭಿಯಂತರರಾದ ರಿಟೂ, ಮೇಲ್ವಿಚಾರಕರಾದ ಸತ್ಯನಾರಾಯಣ, ಹೋಬ್ಳಿ ಇತರಿದ್ದರು.

- ಚಿತ್ರ, ವರದಿ : ಟಿ.ಜಿ. ಸತೀಶ್