ಮಡಿಕೇರಿ, ಮಾ. 23: ಮಡಿಕೇರಿ ರೋಟರಿ ಸಂಸ್ಥೆಯಿಂದ, ಕಳೆದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ 31 ಕುಟುಂಬಗಳಿಗೆ ತಲಾ ರೂ. 10 ಸಾವಿರದಂತೆ ಆರ್ಥಿಕ ನೆರವು ನೀಡಲಾಯಿತು. ರೋಟರಿ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಮೆ. ಓ.ಎಸ್. ಚಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಲೂರು, ಮಕ್ಕಂದೂರು, ಮುಕ್ಕೊಡ್ಲು, ಇಗ್ಗೋಡ್ಲು, ಮೊಣ್ಣಂಗೇರಿ, ಶಿರಂಗಳ್ಳಿ ವ್ಯಾಪ್ತಿಯ ಸಂತ್ರಸ್ತರಿಗೆ ನೆರವು ಮೊತ್ತದ ಚೆಕ್‍ಗಳನ್ನು ವಿತರಿಸಲಾಯಿತು. ಈ ಹಿಂದೆಯೂ 11 ಮಂದಿಗೆ ತಲಾ ರೂ. 15 ಸಾವಿರ ವಿತರಿಸಲಾಗಿತ್ತು ಎಂದು ಸಭೆಯಲ್ಲಿ ತಿಳಿಸಲಾಯಿತು.

‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಹಾಗೂ ರೋಟರಿ ಸಂಸ್ಥೆಯ ಚೀಯಣ್ಣ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಆಶಯ ನುಡಿಯಾಡಿದರು. ಗಳಿಸಿದ ಸಂಪತ್ತನ್ನು ಕಷ್ಟದಲ್ಲಿ ಇರುವವರಿಗೆ ದಾನ ಮಾಡುವದರಲ್ಲಿ ಸಿಗುವ ತೃಪ್ತಿ ಕೇವಲ ಗಳಿಕೆಯನ್ನು ಉಳಿಸಿಕೊಳ್ಳುವದರಲ್ಲಿ ಇರುವದಿಲ್ಲ ವೆಂದು ಅಭಿಪ್ರಾಯಪಟ್ಟರು. ಈ ದಿಸೆಯಲ್ಲಿ ರೋಟರಿ ಕಾರ್ಯ ಶ್ಲಾಘನೀಯವೆಂದು ಪ್ರಶಂಸಿಸಿದರು. ಸಂಸ್ಥೆಯ ಕಾರ್ಯದರ್ಶಿ ಮೃಣಾಲಿನಿ, ಪದಾಧಿಕಾರಿಗಳಾದ ಎಂ. ಈಶ್ವರ್‍ಭಟ್, ಸುರೇಶ್ ಚಂಗಪ್ಪ, ಅನಿಲ್ ಕೃಷ್ಣಾನಿ, ಸದಾ ಶಿವರಾವ್, ಅನಂತ ಸುಬ್ಬರಾವ್, ಕಿಶೋರ್ ಸೇರಿದಂತೆ ಇತರ ಸದಸ್ಯರು, ಸಂತ್ರಸ್ತ ಕುಟುಂಬಸ್ಥರು ಪಾಲ್ಗೊಂಡಿದ್ದರು.