ಗೋಣಿಕೊಪ್ಪಲು, ಮಾ. 21: ರೈತರು ರಾಜಕೀಯ ಶಕ್ತಿಯಾಗಿ ಬೆಳೆದರಷ್ಟೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು, ಮುಂದೆ ಉತ್ತಮ ಅವಕಾಶ ಲಭ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ನೂತನ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ರೈತರಿಗೆ ಕರೆ ನೀಡಿದರು.

ಹುದಿಕೇರಿ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಹೋಬಳಿ ಮಟ್ಟದ ರೈತ ಸಂಘಕ್ಕೆ ಸದಸ್ಯರ ಸೇರ್ಪಡೆ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ರೈತರು ಓಟಿನ ಮೂಲಕ ರಾಜಕೀಯ ಪಕ್ಷಗಳಿಗೆ ರೈತ ಸಂಘದಿಂದ ಉತ್ತರ ಕೊಡಬೇಕಾಗಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ಮಟ್ಟದಿಂದ ರೈತ ಸಂಘ ಸದೃಢವಾಗಿ ಬೆಳೆಯಬೇಕು, ರಾಜಕೀಯವಾಗಿಯೂ ಅಧಿಕಾರ ಹಿಡಿಯಬೇಕು ಎಂದ ಅವರು, ರೈತ ಸಂಘದ ಹಸಿರು ಟವಲಿನ ಶಕ್ತಿ ಏನೆಂಬದು ರಾಜಕೀಯ ಪಕ್ಷದ ನಾಯಕರಿಗೆ ಅರಿವಿದೆ. ಜಿಲ್ಲೆಯಲ್ಲಿ ರೈತ ಚಳುವಳಿಗೆ ಉತ್ತಮ ಬೆಂಬಲ ಸಿಗುತ್ತಿರು ವದು ಆಶಾದಾಯಕ ಬೆಳವಣಿಗೆ ಎಂದರು. ಕೊಡಗು ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಮನು, ಜಿಲ್ಲೆಯಲ್ಲಿ ರೈತ ಸಂಘ ಅಸ್ತಿತ್ವಕ್ಕೆ ಬಂದ ನಂತರ ಅನೇಕ ಹೋರಾಟಗಳನ್ನು ನಡೆಸುವ ಮೂಲಕ ನ್ಯಾಯ ಪಡೆದಿದ್ದೇವೆ. ರಾಜಕೀಯ ರಹಿತ ಹೋರಾಟಕ್ಕೆ ಜಿಲ್ಲೆಯಲ್ಲಿ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿವೆ. ಯಾವದೇ ರಾಜಕೀಯ ಪಕ್ಷಕ್ಕೆ ಮಣೆ ಹಾಕದೆ ರೈತರ ಸಮಸ್ಯೆಗಳನ್ನು ಹೋರಾಟದ ಮೂಲಕ ಬಗೆ ಹರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದರು. ರೈತ ಸಂಘದ ಮೈಸೂರು ಭಾಗದ ರೈತ ಮುಖಂಡ ಅಶ್ವತ್ ನಾರಾಯಣ ಅರಸ್, ಕಳ್ಳೆಂಗಡ ಸುರೇಂದ್ರ, ಚೆಪ್ಪುಡಿರ ಕಾರ್ಯಪ್ಪ, ಜಿಲ್ಲಾ ಉಪಾಧ್ಯಕ್ಷ ರಂಗಪ್ಪ, ಲೋಕ ರಾಜೇ ಅರಸ್, ರವಿಕಿರಣ್, ಹೊಸೂರು ಕುಮಾರ್ ಮಾತ ನಾಡಿದರು. ವೇದಿಕೆಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಚಿ ಇಟ್ಟೀರ ಸಭಿತ, ಅಲೇಮಾಡ ಮಂಜುನಾಥ್, ಭವಿಕುಮಾರ್, ಮಂಡೇಪಂಡ ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.

ರೈತ ಸಂಘಕ್ಕೆ ಗ್ರಾಮೀಣ ಭಾಗವಾದ ಹುದಿಕೇರಿ, ಹೈಸೊಡ್ಲೂರು, ಕಿರುಗೂರು, ನಲ್ಲೂರು ಭಾಗದಿಂದ ರೈತರು ಸಂಘಕ್ಕೆ ಸೇರ್ಪಡೆಗೊಂಡರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಕಾರ್ಯಕ್ರಮ ನಿರೂಪಿಸಿದರು. ರೈತ ಮುಖಂಡ ಚಂಗುಲಂಡ ಸೂರಜ್ ಸ್ವಾಗತಿಸಿದರು. ಜನತಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.