ಕೂಡಿಗೆ, ಮಾ. 21: ಬಿಸಿಲಿನ ಧಗೆಯು ಹೆಚ್ಚಾಗುತ್ತಿದ್ದಂತೆಯೇ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಕಾವೇರಿ ನದಿಯನ್ನು ಅನೇಕ ಗ್ರಾಮಗಳು ಅವಲಂಭಿಸಿವೆ. ಅಂತಹ ಗ್ರಾಮಗಳಿಗೆ ನೀರೊದಗಿಸಲು ಹಾಗೂ ನದಿಯಲ್ಲಿರುವ ಜಲಚರಗಳ ಉಳಿಯುವಿಕೆಯ ಹಿತದೃಷ್ಟಿಯಿಂದ ಕಾವೇರಿ ನದಿ ಸಂಗಮವಾಗುವ ಕೂಡಿಗೆಯಿಂದ ಕೆಆರ್‍ಎಸ್ ಕಾವೇರಿ ನೀರು ಅಚ್ಚುಕಟ್ಟು ವ್ಯಾಪ್ತಿಯವರೆಗೆ ಹಾರಂಗಿ ಅಣೆಕಟ್ಟೆಯಿಂದ ಸ್ವಲ್ಪ ಪ್ರಮಾಣದ ನೀರನ್ನು ಹರಿಯಬಿಡಲಾಗಿದೆ. ಇದೇ ರೀತಿಯಲ್ಲಿ ಹಾಸನ ಜಿಲ್ಲೆಯ ಹೇಮಾವತಿ ನದಿಯಿಂದಲೂ 150 ಕ್ಯೂಸೆಕ್ ನೀರನ್ನು ನದಿಗೆ ಹರಿಸಿರುವದು ತಿಳಿದುಬಂದಿದೆ.

ನದಿ ಪಾತ್ರದ ಗ್ರಾಮಸ್ಥರ ಕುಡಿಯುವ ನೀರು ಮತ್ತು ದನಕರುಗಳಿಗೆ ನೀರೊದಗಿಸುವ ಮನವಿಯ ಮೇರೆಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶದಂತೆ ಸ್ವಲ್ಪ ಪ್ರಮಾಣದ ನೀರನ್ನು ನದಿಗೆ ಹರಿಯಬಿಟ್ಟಿದ್ದಾರೆ.

ಕಾವೇರಿ ನದಿಯ ನೀರು ಹಾಸನ ಜಿಲ್ಲೆಯ ಹೇಮಾವತಿ ನದಿಯೊಂದಿಗೆ ಸೇರಿ ಹರಿಯುವದರಿಂದ ನದಿ ವ್ಯಾಪ್ತಿಯ ಜನರಿಗೆ ಹಾಗೂ ದನಕರುಗಳಿಗೆ ಅನುಕೂಲವಾಗುವದರಿಂದ ಈ ಎರಡೂ ಅಣೆಕಟ್ಟೆಗಳಿಂದಲೂ ನೀರನ್ನು ಹರಿಯಬಿಡಲಾಗಿದೆ.

-ಕೆ.ಕೆ.ನಾಗರಾಜಶೆಟ್ಟಿ.