ಸಿಇಓ. ಲಕ್ಷ್ಮಿಪ್ರಿಯ

ಕುಶಾಲನಗರ, ಮಾ. 21: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಮರ್ಥವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವದು ಶ್ಲಾಘನೀಯ ವಿಚಾರ ಎಂದು ಕೊಡಗು ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಹೇಳಿದರು. ಮಾದಾಪಟ್ಟಣದ ಸ್ತ್ರೀಶಕ್ತಿ ಗುಂಪುಗಳ ಆಶ್ರಯದಲ್ಲಿ ಗ್ರಾಮದ ಅಂಗನವಾಡಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಪ್ರೋತ್ಸಾಹ ನೀಡುವಲ್ಲಿ ಪೋಷಕರು ಗಮನಹರಿಸಬೇಕಿದೆ. ಪ್ರತಿಭೆಯನ್ನು ಗುರುತಿಸುವದರೊಂದಿಗೆ ಆಸಕ್ತಿಯುಳ್ಳ ಕ್ಷೇತ್ರದಲ್ಲಿ ಮುಂದುವರೆಯಲು ಅವಕಾಶ ಕಲ್ಪಿಸುವದು ಪೋಷಕರ ಆದ್ಯ ಕರ್ತವ್ಯವಾಗಿದೆ. ಸ್ತ್ರೀಶಕ್ತಿ ಗುಂಪುಗಳು ರಾಜಕೀಯ ರಹಿತವಾಗಿ ಸಮಾಜಮುಖಿ ಚಿಂತನೆ ಹೊತ್ತು ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಸಾಹಿತಿ ನಯನತಾರ ಪ್ರಕಾಶ್‍ಚಂದ್ರ, ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆಯನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಪಣತೊಡಬೇಕು. ಸಮಾನ ವೇತನ ಒಳಗೊಂಡಂತೆ ಸಮಾಜದಲ್ಲಿ ಸಮಾನತೆಗಳಿಗಾಗಿ ಆರಂಭಗೊಂಡ ಮಹಿಳಾ ಚಳುವಳಿಗಳು ಮಹಿಳಾ ದಿನಾಚರಣೆಗೆ ಅಡಿಪಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸವಿತಾ ರೈ ಮಾತನಾಡಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ಸವಿತಾ ರೈ, ಸುಮತಿ ಸತೀಶ್, ಕೆ.ಸಿ. ದೇವಮ್ಮ, ಹೆಚ್.ಕೆ. ಭವಾನಿ, ಎಂ.ವೈ. ಭಾಗೀರತಿ, ಬಿ.ಎಸ್. ಹರಿಣಾಕ್ಷಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರುಂದತಿ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಮಹೇಶ್, ಸಹಾಯಕ ಸಿ.ಎಂ. ಅಣ್ಣಯ್ಯ, ವಿವಿಧ ಸ್ತ್ರೀಶಕ್ತಿ ಗುಂಪುಗಳ ಪ್ರಮುಖರಾದ ಸುಮತಿ, ಹೆಚ್.ಎಂ. ಹೇಮ, ಎಂ. ನಾಗಮಣಿ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಶಂಷುದ್ದೀನ್ ವಿವಿ ಪ್ಯಾಟ್ ಯಂತ್ರದ ಕುರಿತು ಅರಿವು ಮೂಡಿಸಿದರು.