ವೀರಾಜಪೇಟೆ, ಮಾ. 22: ಎರಡು ಮಹಾ ಯುದ್ಧಗಳನ್ನು ನಾವು ಕಂಡಿದ್ದೇವೆ. ಮೂರನೇ ಯುದ್ಧ ಕುಡಿಯುವ ನೀರಿಗಾಗಿ ಆಗಬಹುದು ಎಂಬ ಊಹೆ ಎಲ್ಲರಲ್ಲ್ಲೂ ಇದೆ ಎಂದು ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ವಿ. ರಮಾ ಹೇಳಿದರು.

ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ನ್ಯಾಯಾಲಯದ ಆವರಣದಲ್ಲಿ ವಿಶ್ವಜಲ, ಗ್ರಾಹಕರ ಹಕ್ಕುಗಳ ದಿನಾಚರಣೆ ಹಾಗೂ ಮತಯಂತ್ರದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಹಾರ ಇಲ್ಲದೆ ಕೆಲವು ಸಮಯ ಬದುಕಬಹುದು. ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಜಲ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ನೀರನ್ನು ಮಿತವಾಗಿ ಬಳಸಿ, ಮಳೆ ಕೊಯ್ಲು ಮೂಲಕ ನೀರಿನ ಮಟ್ಟವನ್ನು ಹೆಚ್ಚಿಸಿಕೊಂಡು ನೀರಿನ ಅಭಾವದಿಂದ ಮುಂಬರುವ ಅನಾಹುತಗಳನ್ನು ತಪ್ಪಿಸುವ ಪ್ರಯತ್ನವಾಗಬೇಕು ಎಂದರು.

ಹಲವಾರು ವರ್ಷಗಳ ಹಿಂದೆ ಗ್ರಾಹಕರ ಹಕ್ಕು ಏನೆಂಬದು ಯಾರಿಗೂ ಅರಿವಿರಲಿಲ್ಲ. ಗ್ರಾಹಕರು ಹಾಗೂ ಮಾರಾಟಗಾರರಿಗೆ ಸಮಾನ ಹಕ್ಕಿದ್ದು ಮಾರಾಟಗಾರರು ಕಳಪೆ ಪದಾರ್ಥಗಳನ್ನು ಮಾರಾಟ ಮಾಡಿದರೆ ಅಂತವರ ವಿರುದ್ಧ ಯಾವದೇ ನ್ಯಾಯಾಲಯ ಶುಲ್ಕ ಇಲ್ಲದೆ ಗ್ರಾಹಕರ ವೇದಿಕೆಗೆ ದೂರು ನೀಡಬಹುದು. ನ್ಯಾಯಾಲಯ ತಾವು ನೀಡಿದ ಅರ್ಜಿಯನ್ನೆ ದೂರು ಎಂದು ಪರಿಗಣಿಸಿ ನ್ಯಾಯ ದೊರಕಿಸುತ್ತದೆ ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಚಿ ಮಾತನಾಡಿ ಮುಂದುವರೆದ ದೇಶಗಳಲ್ಲಿ ಮತದಾನಕ್ಕಾಗಿ ಈಗಲೂ ಬ್ಯಾಲೆಟ್ ಪೇಪರ್‍ಗಳನ್ನು ಬಳಸಲಾಗುತ್ತಿದೆ. ನಮ್ಮ ಭಾರತ ದೇಶದಲ್ಲಿ ಡಿಜಿಟಲ್ ಸೇವೆ ಎಷ್ಟರ ಮಟ್ಟಿಗೆ ಮುಂದುವರೆದಿದೆ ಎಂಬದಕ್ಕೆ ಇವಿಎಂ ಮತ ಯಂತ್ರಗಳೇ ಸಾಕ್ಷಿಯಾಗಿದೆ. ಇದರಿಂದ ನಾವು ಚಲಾಯಿಸಿದ ಮತಗಳು ಆಯ್ಕೆ ಮಾಡಿದ ಅಭ್ಯರ್ಥಿಗೆ ಲಭಿಸಿದೆ ಎಂಬದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಮತಯಂತ್ರದ ಪ್ರಾತ್ಯಕ್ಷತೆ ನೀಡಿ, ಮಾತನಾಡಿ ಅಕ್ಷರಸ್ಥರೇ ಮತದಾನದಲ್ಲಿ ಪಾಲ್ಗೊಳ್ಳುತ್ತಿಲ್ಲ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಅತಿ ಹೆಚ್ಚು ಮತದಾನವಾಗುತ್ತಿದೆ. ಯಾವದೇ ಕಾರಣಕ್ಕೂ ಮತ ಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಅಭ್ಯರ್ಥಿಯ ಬಾವಚಿತ್ರವನ್ನು ಪ್ರಕಟಿಸಲಾಗುತ್ತಿದೆ. ಕುರುಡುತನ ಇರುವವರಿಗೆ ಸಹಾಯಕರಿಲ್ಲದೆ ಬ್ರೈನ್ ಲಿಪಿ, ಅಂಗವಿಕಲರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮತದಾನ ಮಾಡಿರುವದನ್ನು ಖಾತರಿ ಮಾಡಿಕೊಳ್ಳಲು 7 ಸೆಕೆಂಡುಗಳಲ್ಲಿ ಒಂದು ಚೀಟಿ ಬರುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ನಿಮಗೆ ಅರ್ಹರಲ್ಲ ಎಂದು ಕಂಡು ಬಂದರೆ ನೋಟಾ ಎಂಬ ಬಟನ್‍ನ್ನು ಒತ್ತಬಹುದು. 1950 ನಂಬರಿಗೆ ಕರೆ ಮಾಡಿದರೆ ನಿಮ್ಮ ಬೂತ್ ಸಂಖ್ಯೆ ಯಾವದು ಎಂಬದನ್ನು ಖಾತರಿ ಪಡಿಸಿಕೊಳ್ಳಬಹುದು. ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಮೊಬ್ಯೆಲ್‍ನಲ್ಲಿ ಸಿವಿಸಿಲ್ ಎಂಬ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ನೇರವಾಗಿ ದೂರು ನೀಡಬಹುದಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಉಪಸ್ಥಿತರಿದ್ದರು.