ಮಡಿಕೇರಿ, ಮಾ. 22; ಮನುಕುಲದ, ಜೀವರಾಶಿ, ಸಸ್ಯಸಂಕುಲ ಸೇರಿದಂತೆ ಜಗತ್ತಿನ ಉಳಿವಿಗೆ ಜೀವಜಲದ ಸಂರಕ್ಷಣೆ ಅತ್ಯಗತ್ಯವೆಂದು ಶಕ್ತಿ ಪತ್ರಿಕೆ ಉಪ ಸಂಪಾದಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪ್ರಕೃತಿ ಇಕೋ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಅಂತರ್ಜಲ ಕ್ಷೀಣಿಸುವದರೊಂದಿಗೆ ನೀರಿನ ಮಟ್ಟ ಕುಸಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ನೀರನ್ನು ಜೀವ ಜಲವೆಂದು ಕರೆಯಲಾಗುತ್ತಿದೆ. ನೀರು ಮನುಜರಿಂದ ಹಿಡಿದು ಎಲ್ಲ ಜೀವರಾಶಿ, ಸಸ್ಯಸಂಕುಲಗಳ ಉಳಿವಿಗೆ ಅತ್ಯವಶ್ಯ ಅನ್ನಾಹಾರವಿಲ್ಲದೆ ಕೆಲವು ದಿನಗಳಾದರೂ ಬದುಕಬಹುದು, ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ; ಎಲ್ಲರೂ ನೀರನ್ನು ಮಿತವಾಗಿ ಬಳಕೆ ಮಾಡುವದರೊಂದಿಗೆ ಸಂರಕ್ಷಣೆ ಮಾಡಬೇಕಿದೆ. ಮಕ್ಕಳು ಈ ನಿಟ್ಟಿನಲ್ಲಿ ತಮ್ಮ ಮನೆಯಿಂದಲೇ ಗಮನಹರಿಸಬೇಕಿದೆ, ಈಗಾಗಲೇ ನೀರಿಗಾಗಿ ಯುದ್ಧ ಆರಂಭವಾಗಿದೆ ಎಂದು ಕೆಲವೊಂದು ಉದಾಹರಣೆ, ಪ್ರಶ್ನೆಗಳ ಮೂಲಕ ಮನವರಿಕೆ ಮಾಡಿದರು. ನೀರಿನೊಂದಿಗೆ ಪರಿಸರ ಸಂರಕ್ಷಣೆ ಮಾಡಬೇಕೆಂಬ ಶಪಥವನ್ನು ಇಂದಿನಿಂದಲೇ ಕೈಗೊಳ್ಳುವಂತೆ ಕರೆ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯ ಶಿವರಾಂ ಅವರು ಪ್ರಾತ್ಯಕ್ಷಿಕೆ ಮೂಲಕ ನೀರಿನ ಅಗತ್ಯತೆ, ನೀರಿಲ್ಲದಿದ್ದರೆ ಆಗುವ ಸಮಸ್ಯೆಗಳ ಬಗ್ಗೆ ವಿವರವಾಗಿ ತಿಳಿಸಿದರಲ್ಲದೆ, ನೀರಿನ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭ ವಿಶ್ವ ಜಲ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ, ಇಕೋ ಕ್ಲಬ್‍ನ ಅಧ್ಯಕ್ಷೆ ತೇಜಸ್ವಿನಿ ಸ್ವಾಗತಿಸಿದರೆ, ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ್ ಪ್ರ್ಯಾತ್ಯಕ್ಷಿಕೆ ಕಾರ್ಯ ನಡೆಸಿಕೊಟ್ಟರು. ಶಿಕ್ಷಕಿ ಡಿ.ಎಂ.ರೇವತಿ ವಂದಿಸಿದರು.