ವೀರಾಜಪೇಟೆ, ಮಾ. 22: ಮಡಿಕೇರಿ ತಾಲೂಕಿನ ನರಿಯಂದಡ ಗ್ರಾ.ಪಂ. ವ್ಯಾಪ್ತಿಯಲ್ಲಿನ ಪತ್ತೇಟಿ, ಚೇಲಾವರ ವಿಭಾಗದಲ್ಲಿ ಕಾಡಾನೆ ಹಾವಳಿ, ದುರಸ್ತಿ ಕಾಣದ ರಸ್ತೆ, ಕೃಷಿಗೆ ಅಡಚಣೆ, ಕಡಿಮೆ ವಿದ್ಯುತ್ ವೋಲ್ಟೇಜ್, ಕೂಲಿಕಾರ್ಮಿಕರ ಸಮಸ್ಯೆ ಸೇರಿದಂತೆ ಹಲವಾರು ತೊಂದರೆಗಳು ನಿರಂತರವಾಗಿ ಎದುರಾಗುತ್ತಿದ್ದು, ಇದಕ್ಕೆ ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ಜನತೆ ಒಂದು ರೀತಿಯಲ್ಲಿ ಅಸಹಾಯಕ ರಾಗುವಂತಾಗಿದೆ ಎಂದು ಸ್ಥಳೀಯ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಸಂದೇಶವನ್ನು ಅವರುಗಳು ಮಾಧ್ಯಮದ ಮೂಲಕ ರವಾನಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಚೇಲಾವರ ಗ್ರಾಮಸ್ಥರು ಹಾಗೂ ಚೇಲಾವರ ಯುವಕ ಸಂಘದ ಅಧ್ಯಕ್ಷ ಜೈನೀರ ತನು ಮತ್ತಿತರರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದು, ಈ ಮುನ್ನೆಚ್ಚರಿಕೆ ನೀಡಿದ್ದಾರೆ. ಕಾಡಾನೆ ದಾಳಿಯಿಂದ ನಿರಂತರವಾಗಿ ಕೃಷಿ ಫಸಲುಗಳು ನಾಶಗೊಳ್ಳುತ್ತಿವೆ. ಭತ್ತದ ಗದ್ದೆಗಳು ಬರಡಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಭಯಪಡುವಂತಾಗಿದೆ. ಜನಪ್ರತಿನಿಧಿಗಳಿಂದ, ಅಧಿಕಾರಿಗಳಿಂದ ಇದಕ್ಕೆ ಸ್ಪಂದನ ದೊರೆಯುತ್ತಿಲ್ಲ. ಇತ್ತೀಚೆಗೆ ಸ್ಥಳೀಯರೊಬ್ಬರ ಕೆರೆಯಲ್ಲಿ ಕಾಡಾನೆಗಳು ಸಿಲುಕಿಕೊಂಡು ಸಮಸ್ಯೆಯಾಗಿತ್ತು ಎಂದರು. ಸಂಘದ ಕಾರ್ಯದರ್ಶಿ ಪಟ್ಟಚೆರವಂಡ ಸುಬ್ಬಯ್ಯ ಮಾತನಾಡಿ, ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಕುಟುಂಬ ಗಳಿದ್ದು, ವಿದ್ಯುತ್ ವೋಲ್ಟೇಜ್ ಸಮಸ್ಯೆ ನಿರಂತರವಾಗಿದೆ. ಗೃಹ ಬಳಕೆಗೂ ಸಮರ್ಪಕವಾಗಿ ವಿದ್ಯುತ್ ಸಿಗುತ್ತಿಲ್ಲವೆಂದರು. ಸ್ಥಳೀಯ ರಸ್ತೆಗಳ ಅವ್ಯವಸ್ಥೆ ಕುರಿತು ಮಾಹಿತಿಯಿತ್ತ ಬಾಚಮಂಡ ಲೋಕೇಶ್ ಅವರು ಈತನಕ ಬೇಡಿಕೆಗಳಿಗೆ ಸ್ಪಂದನ ದೊರೆತಿಲ್ಲ ವೆಂದು ವಿವರಿಸಿದರು. ಪಟ್ಟಚೆರುವಂಡ ಪೊನ್ನಪ್ಪ ಅವರು ವಿವಿಧ ಸಮಸ್ಯೆ ಗಳಿಂದ ಜನತೆ ಇದೀಗ ಆಕ್ರೋಶಿತ ರಾಗಿದ್ದಾರೆ. ಇದರಿಂದ ಚುನಾವಣೆ ಬಹಿಷ್ಕರಿಸಲು ಮುಂದಾಗಿರುವದಾಗಿ ಹೇಳಿದರು. ಈ ಸಂದರ್ಭ ಪಟ್ಟಚೆರುವಂಡ ಸೋಮಣ್ಣ, ದಿನೇಶ್, ಪೊನ್ನಣ್ಣ, ಪೊನ್ನಪ್ಪ, ಪವನ್ ಹಾಜರಿದ್ದರು.