ಮಡಿಕೇರಿ, ಮಾ. 22: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ, ವಕೀಲರ ಸಂಘ, ಗ್ರಾಹಕರ ವೇದಿಕೆ ಇವರ ವತಿಯಿಂದ ಮತದಾನದ ಮಹತ್ವ ಕುರಿತು ಜಾಗೃತಿ ಹಾಗೂ ಗ್ರಾಹಕರ ಹಕ್ಕುಗಳು ಮತ್ತು ರಕ್ಷಣೆ ಕುರಿತು ಮಾಹಿತಿ ಕಾರ್ಯಕ್ರಮವು ನ್ಯಾಯಾಲಯದ ಸಭಾಂಗಣದಲ್ಲಿ ನಡೆಯಿತು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ವಿ. ಮಲ್ಲಾಪುರ ಮಾತನಾಡಿ, ಪ್ರಜಾಪ್ರಭುತ್ವ ಬಲಪಡಿಸುವ ನಿಟ್ಟಿನಲ್ಲಿ 18 ವರ್ಷ ಪೂರ್ಣಗೊಂಡವರೆಲ್ಲರೂ ಮತದಾನ ಮಾಡುವಂತಾಗಬೇಕು ಎಂದು ಕರೆ ನೀಡಿದರು. ಹದಿನೆಂಟು ವರ್ಷ ಪೂರ್ಣಗೊಂಡವರು ಮತದಾನ ಮಾಡುವದು ತಮ್ಮ ಹಕ್ಕು ಎಂಬದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಮತದಾನದ ದಿನದಂದು ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು ಎಂದು ಹೇಳಿದರು.

ಪ್ರತಿಯೊಬ್ಬರಲ್ಲಿಯೂ ಗ್ರಾಹಕರ ಹಕ್ಕುಗಳ ಬಗ್ಗೆಯೂ ತಿಳುವಳಿಕೆ ಇರಬೇಕು. ಇದರಿಂದ ವಂಚನೆಗೆ ಒಳಗಾಗುವದು ತಪ್ಪುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಿ.ಪಂ. ಸಿಇಒ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷೆ ಕೆ. ಲಕ್ಷ್ಮಿಪ್ರಿಯಾ ಮಾತನಾಡಿ, ಹದಿನೆಂಟು ವರ್ಷ ಪೂರ್ಣಗೊಂಡ ವರು ಇದುವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡದಿರುವವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ ಮತ ಹಕ್ಕು ಚಲಾಯಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷ ಸಿ.ವಿ. ಮರಗೂರ ಮಾತನಾಡಿ, ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕ ರಾಗಿದ್ದಾರೆ. ಆದರೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮೋಸಕ್ಕೆ ತುತ್ತಾಗುತ್ತಾರೆ. ಎಲ್ಲರೂ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು. ಅತಿ ಕಡಿಮೆ ಖರ್ಚಿನಲ್ಲಿ ಗ್ರಾಹಕರ ವೇದಿಕೆಯಲ್ಲಿ ನ್ಯಾಯ ಒದಗಿಸಲಾಗುತ್ತದೆ. ಈ ಅವಕಾಶ ಬಳಸಿಕೊಳ್ಳುವಂತಾಗಬೇಕು ಎಂದು ಮನವಿ ಮಾಡಿದರು. ಪ್ರತಿಯೊಂದು ರಂಗದಲ್ಲಿಯೂ ಶೋಷಣೆ, ಮೋಸ ಇದ್ದೇ ಇರುತ್ತದೆ. ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳುವಳಿಕೆ ಇರಬೇಕು ಎಂದು ಮರಗೂರ ಸಲಹೆ ಮಾಡಿದರು.

ವಿದ್ಯುನ್ಮಾನ ಮತಯಂತ್ರ ತರಬೇತಿದಾರ ಷಂಶುದ್ದೀನ್ ಮಾತನಾಡಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲು ಸಿ-ವಿಜಿಲ್ ಮೊಬೈಲ್ ಆ್ಯಪ್ ಆರಂಭಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಮೇಲೆ ಕಣ್ಣಿಡಲು ಈ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ನಿಖರ ದೂರು ದಾಖಲಿಸಬಹುದಾಗಿದೆ. ಸಿ-ವಿಜಿಲ್‍ಗೆ ನೇರವಾಗಿ ಫೋಟೋ ಮತ್ತು ವೀಡಿಯೋವನ್ನು ಕಳುಹಿಸ ಬಹುದು ಎಂದು ಹೇಳಿದರು.

ಚುನಾವಣಾ ಆಯೋಗವು ವಿದ್ಯುನ್ಮಾನ ಮತಯಂತ್ರದಲ್ಲಿ ಪ್ರಮುಖವಾದ ಬ್ಯಾಲೆಟ್, ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್ ಬಳಸುತ್ತಿದೆ. ಮತ ಹಕ್ಕು ಚಲಾಯಿಸುವದು, ದಾಖಲಾಗುವದು ಮತ್ತು ಯಾರಿಗೆ ಮತ ಚಲಾಯಿಸ ಲಾಗಿದೆ ಎಂಬದನ್ನು ಖಾತರಿ ಮಾಡಿ ಕೊಳ್ಳಲು ಇವು ಸಹಕಾರಿಯಾಗಿದೆ ಎಂದರು.

ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಡಿ. ಪವನೇಶ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯಕುಮಾರ್, ನೂರುನ್ನೀಸಾ, ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‍ಸಿ ಬಿ.ಕೆ. ಮನು, ಸರ್ಕಾರಿ ಅಭಿಯೋಜಕರಾದ ಕೃಷ್ಣವೇಣಿ, ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್ ಇತರರು ಇದ್ದರು.