ಸೋಮವಾರಪೇಟೆ, ಮಾ. 21: ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಗುರುಸಿದ್ಧ ಸ್ವಾಮಿ ವಿದ್ಯಾಪೀಠ, ಶ್ರೀಕ್ಷೇತ್ರ ಕಿರಿಕೊಡ್ಲಿ ಮಠ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ತಾ. 23 ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕಿನ ಕೊಡ್ಲಿಪೇಟೆ-ಕಿರಿಕೊಡ್ಲಿ ಭದ್ರಮ್ಮ ಮಹಾಂತಪ್ಪ ಸಭಾಂಗಣದಲ್ಲಿ ‘’ವರ್ತಮಾನಕ್ಕೂ ವಚನ-ಚಿಂತನಾ ಗೋಷ್ಠಿ ಕಾರ್ಯಕ್ರಮ ನಡೆಯಲಿದೆ.

ಚಿಂತನಾಗೋಷ್ಠಿಯ ಸಾನ್ನಿಧ್ಯವನ್ನು ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ, ಮುದ್ದಿನಕಟ್ಟೆ ಮಠಾಧೀಶ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ವೀರಶೈವ ಮಹಾಸಭಾದ ಕೆ.ಬಿ. ಹಾಲಪ್ಪ, ವೀರಶೈವ ಸಮಾಜದ ಬಿ.ಕೆ. ಯತೀಶ್, ಜಿ.ಪಂ. ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್, ವೀರಾಜಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಸ್. ಸುರೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಪೂರ್ವಾಹ್ನ 11 ಗಂಟೆಗೆ ‘ವಚನ ಕ್ರಾಂತಿಯ ಪ್ರತಿಭಟನೆ ಮತ್ತು ಪರ್ಯಾಯ ಸ್ಥಾಪನೆಯ ನೆಲೆಗಳು’ ವಿಷಯದ ಬಗ್ಗೆ ಚಿಕ್ಕಅಳುವಾರ ಸ್ನಾತಕ್ಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಅಹ್ಮದ್, 12 ಗಂಟೆಗೆ ‘ವಚನೋಕ್ತ ಶರಣ ಧರ್ಮದ ಜಾಗತಿಕ ಮೌಲ್ಯಗಳು’ ವಿಷಯದ ಬಗ್ಗೆ ಕೊಡ್ಲಿಪೇಟೆ ಗೌರಮ್ಮ ಶಾಂತಮಲ್ಲಪ್ಪ ಪದವಿ ಕಾಲೇಜು ವಿದ್ಯಾರ್ಥಿನಿ ಗಾನವಿ ಅವರುಗಳು ವಿಷಯ ಮಂಡಿಸಲಿದ್ದಾರೆ.

ಅಪರಾಹ್ನ 2 ಗಂಟೆಗೆ ವಚನ ಸಂಗಮ ಮತ್ತು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಕಲ್ಲಳ್ಳಿ ಮಠಾಧೀಶ ರುದ್ರಮುನಿ ಸ್ವಾಮೀಜಿ, ಹಿರಿಯ ವಕೀಲ ಚಂದ್ರಮೌಳಿ ಸೇರಿದಂತೆ ಇತರರು ಭಾಗವಹಿಸಲಿದ್ದು, ವೀರಾಜ ಪೇಟೆಯ ಸುರಭಿ ಪ್ರಸಾದ್ ಅವರು ರಚಿಸಿರುವ ‘ನೀರವತೆ’-ಕವನ ಸಂಕಲನವನ್ನು ಬಿಡುಗಡೆ ಮಾಡಲಾಗುವದು ಎಂದು ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾ ಕಾರ್ಯದರ್ಶಿ ಹೆಚ್.ಎಸ್. ಪ್ರೇಮ್‍ನಾಥ್ ತಿಳಿಸಿದ್ದಾರೆ.