ಶನಿವಾರಸಂತೆ, ಮಾ. 21: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದಲ್ಲಿ 400 ವರ್ಷಗಳ ಇತಿಹಾಸವಿರುವ ಬಾವಿ ಬಸವೇಶ್ವರ ದೇವರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಸುತ್ತಮುತ್ತಲ ವಿವಿಧ ಗ್ರಾಮಗಳಿಂದ ಬಂದಿದ್ದ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಆರಾಧನಾ ಮಹೋತ್ಸವದ ವಿಶೇಷವೆಂದರೆ ಪ್ರತಿವರ್ಷ ಶಿವರಾತ್ರಿ ಹಬ್ಬದ ನಂತರ ಹಾಗೂ ಯುಗಾದಿ ಹಬ್ಬದ ಒಳಗೆ ವಾರ್ಷಿಕ ವಿಶೇಷ ನಡೆಯುತ್ತದೆ. ಪ್ರಕೃತಿಯ ನಡುವೆ ಮೇಲ್ಭಾಗದಲ್ಲಿ ಉದ್ಭವ ಬಸವೇಶ್ವರ ದೇವರ ವಿಗ್ರಹದ ಗುಡಿಯಿದ್ದು, ಕೆಳ ಭಾಗದಲ್ಲಿ ಸಿಹಿ ನೀರಿನ ತೀರ್ಥದ ಕೊಳವಿದೆ. ಇದಕ್ಕೆ ಹೊಂದಿಕೊಂಡಂತೆ ಕೆರೆಯೊಂದು ಇದೆ. ವರ್ಷಕ್ಕೊಮ್ಮೆ ನಡೆಯುವ ಆರಾಧನಾ ಮಹೋತ್ಸವದಲ್ಲಿ ಭಕ್ತಾದಿಗಳು ಹಣ್ಣುಕಾಯಿ, ಪೂಜೆ ಮಾಡಿಸಿಕೊಂಡು ಕೊಳಕ್ಕೆ ಹರಕೆಯ ರೂಪದಲ್ಲಿ ನಾಣ್ಯಗಳನ್ನು ಹಾಕಿ ಸಿಹಿ ನೀರಿನ ತೀರ್ಥ ತೆಗೆದುಕೊಂಡು ಹೋಗುತ್ತಾರೆ. ಈ ತೀರ್ಥವನ್ನು ಜಾನುವಾರುಗಳಿಗೆ ಕುಡಿಸಿದರೆ ಕಾಯಿಲೆಗಳಿದ್ದರೆ ವಾಸಿಯಾಗುವದು ಎಂಬ ಪ್ರತೀತಿ ಇದೆ. ಮಕ್ಕಳಿಗೆ ಮುಡಿ ತೆಗೆಯುವ ಸಂಪ್ರದಾಯವು ಇದೆ. ದೇವರ ಗುಡಿಯ ಮುಂಭಾಗ ದೇವರಿಗೆ ಭಕ್ತಾದಿಗಳು ಮಾಡಿಕೊಂಡ ಹರಕೆಯಂತೆ ಸಾವಿರಾರು ತೆಂಗಿನಕಾಯಿಯ ಈಡುಗಾಯಿ ಒಡೆಯಲಾಗುತ್ತದೆ. ಪ್ರತಿವರ್ಷ ಆರಾಧನಾ ಮಹೋತ್ಸವ ಆಚರಿಸುವ ಸಂದರ್ಭ ತೀರ್ಥ ಕೊಳವನ್ನು ಶುಚಿಗೊಳಿಸಲಾಗುತ್ತದೆ. ಕೊಳದ ಒಳಗಿರುವ ಹರಕೆಯ ರೂಪದ ಸಾವಿರಾರು ನಾಣ್ಯಗಳನ್ನು ಹೊರ ತೆಗೆದು ಆರಾಧನಾ ಮಹೋತ್ಸವ ಆಚರಿಸಲು ಬಳಸಲಾಗುತ್ತದೆ.
ಮಹೋತ್ಸವದ ದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜೆ ಮಾಡಿಸಿ ಹರಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು. ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದಲ್ಲಿ ಕೊಡಗಿನ ತಲಕಾವೇರಿಯಂತೆ ಪ್ರಸಿದ್ಧ ತಾಣವಾಗಿ ಮಾರ್ಪಾಡಾಗುತ್ತದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನಹರಿಸಲಿ ಎನ್ನುತ್ತಾರೆ ಭಕ್ತಾದಿಗಳು. ಮಹೋತ್ಸವದ ನೇತೃತ್ವವನ್ನು ಗ್ರಾಮ ಪ್ರಮುಖರಾದ ಸಿ.ಪಿ. ಹರೀಶ್, ಸಿ.ಕೆ. ಕೊಮಾರಪ್ಪ, ಸಿ.ಜೆ. ಗಿರೀಶ್, ಗಣಪತಿ, ಬೆಳ್ಳಿಯಪ್ಪ ಇತರರು ವಹಿಸಿದ್ದು, ಇತರ ಪ್ರಮುಖರಾದ ಕೆ.ಎಂ. ಗಣೇಶ್, ಡಿ.ಪಿ. ಬೋಜಪ್ಪ, ಎಂ.ಎ. ಆಧಿಲ್ಪಾಷ, ಎನ್.ಕೆ. ಅಪ್ಪಸ್ವಾಮಿ, ಎನ್.ಕೆ. ಸುಮತಿ, ಕುಸುಮ ಇತರರು ಉಪಸ್ಥಿತರಿದ್ದು, ಉತ್ಸಾಹಿ ಯುವಕರ ತಂಡ ಅನ್ನಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಶ್ರಮಿಸಿದರು.