ಸಿದ್ದಾಪುರ, ಮಾ. 21: ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಗ್ರಾ.ಪಂ. ಮುಖ್ಯ ರಸ್ತೆ ಬದಿಯಲ್ಲೇ ಮೀನು ಮಾಂಸದ ಮಾರಾಟ ಮಳಿಗೆಯನ್ನು ನಿರ್ಮಾಣ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದಾಪುರ ಗ್ರಾ.ಪಂ. ಕಳೆದ ವರ್ಷ ಪಟ್ಟಣದಲ್ಲಿ ವ್ಯಾಪಾರ ಮಾಡುವ ಮಾಂಸ ವ್ಯಾಪಾರಿಗಳಿಂದ ಅಶುಚಿತ್ವ ಆಗುತ್ತಿರುವ ಹಿನ್ನೆಲೆ ಮಾರುಕಟ್ಟೆಯಲ್ಲಿ ಸುಮಾರು ರೂ. 18 ಲಕ್ಷ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ನೂತನ ಮಳಿಗೆಗಳನ್ನು ನಿರ್ಮಿಸಿತ್ತು. ಆದರೇ ಗ್ರಾ.ಪಂ. ಆಡಳಿತ ಮಂಡಳಿ ಇದೀಗ ಮಾರುಕಟ್ಟೆಯ ಮಳಿಗೆಯಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡದೆ, ಅವೈಜ್ಞಾನಿಕವಾಗಿ ಲೊಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಬದಿಯಲ್ಲಿ ನೂತನ ಮಳಿಗೆ ನಿರ್ಮಾಣ ಮಾಡಲು ಮುಂದಾಗಿದ್ದು, ರಸ್ತೆ ಬದಿಯಲ್ಲೇ ಮೀನು ಮಾಂಸ ಮಾರಾಟ ಮಾಡಲು ಅನುವು ಮಾಡಿಕೊಡುತ್ತಿದೆ. ಕಳೆದ ಸಾಲಿನಲ್ಲಿ ಮಾಂಸ ಮೀನು ಮಾರಾಟವನ್ನು ಮಾರುಕಟ್ಟೆಗೆ ಸ್ಥಳಾಂತರಿಸಬೇಕೆಂದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಳಿಗೆ ನಿರ್ಮಿಸಿದ್ದು, ಈವರೆಗೂ ಕೂಡ ಸ್ಥಳಾಂತರವಾಗದೇ ಮಳಿಗೆಗಳು ಅನಾಥವಾಗಿ ಬಿದ್ದಿವೆ. ಆದರೆ ಇದೀಗ ಗ್ರಾ.ಪಂ. ಆಡಳಿತ ಮಂಡಳಿ ತರಾತುರಿಯಲ್ಲಿ ರಸ್ತೆ ಬದಿಯಲ್ಲೇ ನೂತನ ಮಳಿಗೆ ನಿರ್ಮಾಣ ಮಾಡುತ್ತಿದ್ದು, ಕ್ರಿಯಾಯೋಜನೆ ಯಲ್ಲಿಯೂ ಕೂಡ ಕಾಮಗಾರಿಯನ್ನು ಸೇರಿಸದೇ ಕೆಲವರ ವೈಯಕ್ತಿಕ ಹಿತಾಸಕ್ತಿಗೆ ಮುಂದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದೀಗ ನಿರ್ಮಾಣವಾಗುತ್ತಿರುವ ನೂತನ ಮಳಿಗೆಯ ಜಾಗವು ರಸ್ತೆ ಬದಿಯಾಗಿದ್ದು, ಲೊಕೋಪಯೋಗಿ ಇಲಾಖೆಯಿಂದ ಯಾವದೇ ಅನುಮತಿಯನ್ನು ಪಡೆಯದೇ ಕಾಮಗಾರಿಯನ್ನು ಆರಂಭಿಸಿದ್ದು, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕಾದ ಹಾಗೂ ರಸ್ತೆ ಬದಿಯಲ್ಲಿ ಮಳಿಗೆಗಳನ್ನು ನಿರ್ಮಿಸಲು ಅನುಮತಿ ನೀಡಬಾರದು. ಆದರೂ ಗ್ರಾ.ಪಂ. ಕಾನೂನು ಮೀರಿ ಮಳಿಗೆ ನಿರ್ಮಿಸಿರುವದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಸಿದ್ದಾಪುರದ ಮಡಿಕೇರಿ ರಸ್ತೆಯಲ್ಲಿ ಈ ಹಿಂದೆ ವ್ಯಾನ್ ನಿಲ್ದಾಣವಿದ್ದು, ವಾಹನ ನಿಲುಗಡೆಗೆ ಜಾಗವಿಲ್ಲ ಎಂಬ ಕಾರಣಕ್ಕೆ ಗ್ರಾ.ಪಂ. ಆಡಳಿತ ಮಂಡಳಿ ತೀವ್ರ ವಿರೋಧದ ನಡುವೆಯೂ ವ್ಯಾನ್ ನಿಲ್ದಾಣವನ್ನು ತೆರವುಗೊಳಿಸಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದೀಗ ವಾಹನ ನಿಲುಗಡೆ ಜಾಗದಲ್ಲೇ ಮೀನು ಮತ್ತು ಮಾಂಸ ಮಾರಾಟ ಮಳಿಗೆಯನ್ನು ಮಾಡುತ್ತಿದ್ದು, ವ್ಯಾನ್ ಮಾಲೀಕರು ಹಾಗೂ ಸಾರ್ವಜನಿಕರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಬಸ್ ನಿಲ್ದಾಣದ ಸಾರ್ವಜನಿಕರ ಶೌಚಾಲಯದ ಗುಂಡಿ ಬದಿಯಲ್ಲೇ ಮಳಿಗೆ ನಿರ್ಮಾಣ ಮಾಡುತ್ತಿದ್ದು, ಗ್ರಾ.ಪಂ. ಬಹಿರಂಗವಾಗಿಯೇ ಅಶುಚಿತ್ವಕ್ಕೆ ಬೆಂಬಲ ನೀಡಿದಂತಾಗಿದೆ. ಈಗಾಗಲೇ ಕಸದ ವಿಲೇವಾರಿ ಸಮಸ್ಯೆಯಿಂದ ಸಿದ್ದಾಪುರ ಪಟ್ಟಣದ ಅಲ್ಲಲ್ಲಿ ಕೊಳೆತ ತ್ಯಾಜ್ಯಗಳಿಂದ ದುರ್ನಾತ ಬೀರುತ್ತಿದ್ದು, ಇದೀಗ ಮಡಿಕೇರಿ ರಸ್ತೆಯ ರಸ್ತೆ ಬದಿಯಲ್ಲಿ ಮೀನು, ಮಾಂಸ ಮಾರಾಟ ಮಳಿಗೆ ಆರಂಭವಾದರೆ ಮತ್ತಷ್ಟು ಅಶುಚಿತ್ವ ಹಾಗೂ ದುರ್ನಾತ ಬೀರುವದರಲ್ಲಿ ಸಂಶಯವಿಲ್ಲ. ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ಮೀನು, ಮಾಂಸ ಮಾರಾಟ ಮಾಡುವದರಿಂದ ಸಾರ್ವಜನಿಕರು ಕೂಡ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ವಚ್ಛ ಭಾರತ ಅಭಿಯಾನವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕಾದ ಗ್ರಾ.ಪಂ. ಅಶುಚಿತ್ವಕ್ಕೆ ಎಡೆಮಾಡಿ ಕೊಡುತ್ತಿರುವದು ವಿಪರ್ಯಾಸ ವಾಗಿದೆ. ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಕೂಡ ನೀಡದೇ ಏಕಾಏಕಿ ರಸ್ತೆ ಬದಿಯಲ್ಲಿ ಮಳಿಗೆ ಯನ್ನು ನಿರ್ಮಾಣ ಮಾಡಿರುವದರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡುವದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.