ಕುಶಾಲನಗರ, ಮಾ, 21: ಯಾವದೇ ರಾಷ್ಟ್ರಗಳು ತನ್ನ ಸಾರ್ವಭೌಮತ್ವದ ಅಸ್ತಿತ್ವವನ್ನು ಉಳಿಸಿಕೊಂಡಲ್ಲಿ ಮಾತ್ರ ತನ್ನ ಅರ್ಥಿಕ ಅಭಿವೃದ್ಧಿಯನ್ನು ಹೊಂದಲು ಸಾದ್ಯ ಎಂದು ಜರ್ಮನಿಯ ಲಿಪ್ಜಿಗ್ ವಿಶ್ವವಿದ್ಯಾನಿಲಯದ ಪ್ರೊ.ಹಾರ್ಟ್‍ಮಟ್ ಎಲೆನ್ಹಾನ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಜೀನ್ ಮಾನೆಟ್ ಮಾಡ್ಯುಲ್ ಸಹಯೋಗದಲ್ಲಿ ಜರುಗಿದ ಯೂರೋಪಿಯನ್ ಯೂನಿಯನ್ ರಾಜಕೀಯ ಅರ್ಥಿಕತೆ, ವಿಷಯಗಳು ಮತ್ತು ಕಾಳಜಿಗಳು ಕುರಿತಾದ ಒಂದು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡಿದ ಅವರು, ಯೂರೋಪಿನ್ ಒಕ್ಕೂಟದಲ್ಲಿ ಜರ್ಮನಿಯು ಸಮಾನತೆಯ ನಿಯಂತ್ರಣವನ್ನು ತನ್ನ ಸದಸ್ಯ ರಾಷ್ಟ್ರಗಳಿಂದ ನಿರೀಕ್ಷಿಸುತ್ತದೆ. ಹಾಗೆಯೇ ಯೂರೋಪಿಯನ್ ಯೂನಿಯನ್ ನಿಯಂತ್ರಣವು ಸಾಮಾನ್ಯ ಮಾರುಕಟ್ಟೆ, ಯೂರೋ ಕರೆನ್ಸಿ, ಕಾನೂನಿನ ಒಮ್ಮತದಿಂದ ಕೂಡಿದೆ ಎಂದರು.
ಯೂರೋಪಿಯನ್ ಒಕ್ಕೂಟದಲ್ಲಿ ಜರ್ಮನಿಯ ಪಾಲುದಾರಿಕೆ ಮತ್ತು ರಾಜಕೀಯ ನಾಯಕತ್ವ ಹಾಗೂ ಅದರ ನಿಯಂತ್ರಣದ ಕುರಿತು ಪ್ರಸ್ತಾಪಿಸುತ್ತಾ, ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರ ರಾಷ್ಟ್ರಗಳ ನಡುವಿನ ಬಂಡವಾಳ ಹೂಡಿಕೆ ಮತ್ತು ಅರ್ಥಿಕ ಅಭಿವೃದ್ದಿ ಹೊಂದಲು ತನ್ನ ದೇಶಗಳ ಕರೆನ್ಸಿ ಮತ್ತು ಯೂರೋ ಕರೆನ್ಸಿಯಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಅರ್ಥಿಕ ಬಲವರ್ಧನೆಯನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅದರಂತೆ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು ಸಾಮಾನ್ಯ ವಲಸೆ ನೀತಿಯಲ್ಲಿ ಕೂಡ ಹೊಂದಾಣಿಕೆ ಮಾಡಿಕೊಂಡು ಪರಸ್ಪರ ಸಂಬಂಧಗಳನ್ನು ಉತ್ತಮಗೊಳಿಸಿಕೊಳ್ಳಲು ಸಹಕರಿಸಬೇಕಾಗುತ್ತದೆ ಎಂದು ವಿವರಿಸಿದರು.
ಜೀನ್ ಮಾನೆಟ್ ಮಾಡ್ಯುಲ್‍ನ ಸಂಯೋಜಕರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಆದ ಪ್ರೊ.ಜಯರಾಜ್ ಅಮೀನ್ ಅವರು, ಯೂರೋಪಿಯನ್ ಯೂನಿಯನ್‍ನ ತತ್ವಗಳು ಮತ್ತು ಕೋಪನ್‍ಹೇಗನ್ ಮಾನದಂಡವಾದ ರಾಜಕೀಯ, ಆರ್ಥಿಕ ಅಂಶಗಳು ನೆರೆಹೊರೆ ನೀತಿಗೆ ಸಹಕಾರಿಯಾಗಿರುವ ಬಗ್ಗೆ ವಿವರಣೆ ಒದಗಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ನಾತಕೋತ್ತರ ಕೇಂದ್ರ ನಿರ್ದೇಶಕರಾದ ಪ್ರೊ. ಮಂಜುಳಾ ಶಾಂತರಾಮ್ ಮಾತನಾಡಿ, ಜಗತ್ತಿನ 100 ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು 25 ವಿಶ್ವವಿದ್ಯಾನಿಲಗಳು ಯೂರೋಪಿಯನ್ ಯೂನಿಯನ್ ರಾಷ್ಟ್ರಗಳದ್ದೇ ಅಗಿವೆ. ಏಕತೆ ಮೂಲಕ ಯೂರೋಪಿಯನ್ ಯೂನಿಯನ್ ಯಶಸ್ವಿ ಕಾಣುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ.ಟಿ.ಕೇಶವಮೂರ್ತಿ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಬಿ.ಎಸ್. ಮಮತಾ, ತಾರಾ, ವಿವಿಧ ವಿಭಾಗಗಳ ಪ್ರಾಧ್ಯಾಪಕರುಗಳು ಮತ್ತು ಉಪನ್ಯಾಸಕರುಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.