ಹಿತರಕ್ಷಣಾ ಸಮಿತಿ ಆಗ್ರಹ
ಮಡಿಕೇರಿ, ಮಾ. 21: ಕೊಡವ ಜನಾಂಗದ ಮದುವೆ ಸಂದರ್ಭದಲ್ಲಿ ಗಂಗಾಪೂಜೆ (ನೀರ್‍ಎಡ್‍ಪೊ) ಅವಧಿಯಲ್ಲಿ ಮದ್ಯ ಬಳಕೆಗೆ ಅವಕಾಶ ನೀಡುವದಿಲ್ಲ ಎಂದು ಅಮ್ಮತ್ತಿ ಕೊಡವ ಸಮಾಜ ನಿರ್ಣಯ ಕೈಗೊಂಡಿರುವದನ್ನು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಸ್ವಾಗತಿಸಿ, ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಅವರು ಅಮ್ಮತ್ತಿ ಕೊಡವ ಸಮಾಜ ಈ ವಿಚಾರದಲ್ಲಿ ದಿಟ್ಟ ತೀರ್ಮಾನವನ್ನೇ ಕೈಗೊಂಡಿದೆ. ಇದು ಕೇವಲ ಅಮ್ಮತ್ತಿ ಸಮಾಜದಲ್ಲಿ ಮಾತ್ರ ಜಾರಿಯಾದರೆ ಸಾಲದು, ಇನ್ನಿತರ ಎಲ್ಲಾ ಕೊಡವ ಸಮಾಜಗಳು ಸೇರಿದಂತೆ, ಕಲ್ಯಾಣ ಮಂಟಪಗಳಲ್ಲಿ ಈ ನಿಯಮ ಜಾರಿಯಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಅಮ್ಮತ್ತಿ ಸಮಾಜದ ಆಡಳಿತ ಮಂಡಳಿಗೆ ಬೆಂಬಲ ವ್ಯಕ್ತಪಡಿಸುವದಾಗಿ ಅವರು ತಿಳಿಸಿದ್ದಾರೆ.